ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು – ಕಾರಿನ ಮುಂಭಾಗ ಸಂಪೂರ್ಣ ಭಸ್ಮ

ಕಡಬ ನೆಲ್ಯಾಡಿ : ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದೆ. ಸಮಯಪ್ರಜ್ಞೆ ಪ್ರದರ್ಶಿಸಿದ ಚಾಲಕ ಹಾಗೂ ಸ್ಥಳೀಯರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.


ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಗೋಳಿತ್ತೊಟ್ಟು ಶಿರಾಡಿಗುಡ್ಡೆ ಸಮೀಪ ತಲುಪುತ್ತಿದ್ದ ವೇಳೆ ಕಾರಿನ ಇಂಜಿನ್ ಭಾಗದಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಬೆಂಗಳೂರು ನಿವಾಸಿ ಲೋಕೇಶ್ ತಕ್ಷಣ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ತನ್ನ ಸಹೋದರನೊಂದಿಗೆ ಕಾರಿನಿಂದ ಕೆಳಗಿಳಿದು ಸುರಕ್ಷಿತವಾಗಿ ಪಾರಾಗಿದ್ದಾರೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಕಂಪನಿಯ ಟ್ಯಾಂಕರ್ ಅನ್ನು ಸ್ಥಳಕ್ಕೆ ಕರೆಸಿ ನೀರು ಸಿಂಪಡಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದಾಗ್ಯೂ, ಕಾರಿನ ಇಂಜಿನ್ ಇರುವ ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪುತ್ತೂರು ಸಂಚಾರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!