ಪುರುಷರಕಟ್ಟೆ ಪ್ರಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ

ಪುತ್ತೂರು: ಪುರುಷರಕಟ್ಟೆ ಘಟನೆಯನ್ನು ಇಟ್ಟುಕೊಂಡು ಬಿಜೆಪಿಯು ಕೋಮು ಗಲಭೆ ಸೃಷ್ಟಿಸಲು ನಡೆಸಿದ ಹುನ್ನಾರವು ಜಿಲ್ಲಾ ಎಸ್ಪಿ ಡಾ.ಅರುಣ್ ಅವರ ಕಟ್ಟುನಿಟ್ಟಿನ ಕ್ರಮದಿಂದ ವಿಫಲಗೊಂಡಿದ್ದು, ಗಲಭೆ ಎಬ್ಬಿಸಲು ಹುನ್ನಾರ ನಡೆಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ(ಗ್ರಾಮಾಂತರ) ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಆಗ್ರಹಿಸಿದರು.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಯಾವುದೇ ವಿಚಾರಗಳ ಕುರಿತು ಮಾತನಾಡದ ಸಂಸದರು ಪ್ರಸ್ತುತ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ತೋರಿಸುವ ದೃಷ್ಟಿಯಿಂದ ಪುರುಷರಕಟ್ಟೆಯ ಪ್ರಕರಣದ ಕುರಿತು ಮಾತನಾಡಿದ್ದು, ಮಾತನಾಡುವ ಭರದಲ್ಲಿ ಶಾಸಕ ಅಶೋಕ್ ರೈ, ಕಾಂಗ್ರೆಸ್ ಸರಕಾರದ ಕುರಿತು ಕೂಡ ಆರೋಪ ಮಾಡಿದ್ದಾರೆ. ಇಂತಹ ವಿಚಾರಗಳನ್ನು ಮಾತನಾಡಿ ಜಿಲ್ಲೆಯ ಬಿಜೆಪಿಯಲ್ಲಿರುವ ನಳಿನ್ ಕುಮಾರ್ ಕಟೀಲು ಅವರ ಕೋಟೆಯನ್ನು ಮುರಿಯಲು ಯತ್ನಿಸುತ್ತಿದ್ದಾರೆ.


ಪುತ್ತೂರು ಶಾಸಕರ ನೈಜ ಹಿಂದುತ್ವದ ಮುಂದೆ ಬಿಜೆಪಿಯ ಡೋಂಗಿ ಹಿಂದುತ್ವ ಬಣ್ಣ ಕಳೆದುಕೊಂಡಿದೆ. ಹಾಲಿ ಎಸ್ಪಿಯವರು ಬಂದ ಬಳಿಕ ಬಿಜೆಪಿಯ ಕೋಮು, ಗೋವಿನ ರಾಜಕೀಯಕ್ಕೆ ಕಡಿವಾಣ ಬಿದ್ದಿದ್ದು, ದ್ವೇಷ ಮಾಡುತ್ತಾ ಜಿಲ್ಲೆಯ ಶಾಂತಿ ಕದಡುತ್ತಿದ್ದವರು ಕಾನೂನಿಗೆ ಹೆದರಿ ಬಿಲ ಸೇರಿದ್ದಾರೆ. ಪುತ್ತೂರಿನಲ್ಲಿ ಕ್ರಿಯಾಶೀಲ ಪ್ರತಿಪಕ್ಷವಾಗಿರಬೇಕಿದ್ದ ಬಿಜೆಪಿಗೆ ಪುತ್ತಿಲ ಪರಿವಾರದ ಜತೆ ಪೈಪೋಟಿಯೇ ಹೆಚ್ಚಾಗಿದೆ. ಬಿಜೆಪಿಯಂತೆ ಕಾಂಗ್ರೆಸ್ ನಲ್ಲಿಯೂ ಕೆಲವು ಕೋಮುವಾದಿಗಳಿದ್ದು, ಅವರು ಮುಸ್ಲಿಂ ಯುವಕರು ಗಾಂಜಾ ಸೇದುವವರು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಶುಕೂರ್ ಹಾಜಿ, ಸುರೇಶ್ ಪೂಜಾರಿ, ಅಮರನಾಥ ಗೌಡ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಿಯಾಜ್ ಪರ್ಲಡ್ಕ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!