ಮಂಗಳೂರು:ಭಾರತದ 1965 ಹಾಗೂ 1971ರ ಯುದ್ಧಗಳಲ್ಲಿ ಬಳಸಲಾಗಿದ್ದ ಐತಿಹಾಸಿಕ ಟಿ-55 ಯುದ್ಧ ಟ್ಯಾಂಕ್ ಹಾಗೂ .303 ರೈಫಲ್‌ಗೆ ಮಂಗಳೂರಿನಲ್ಲಿ ಶಾಶ್ವತ ಸ್ಥಾನ ಕಲ್ಪಿಸಲಾಗಿದೆ. ಕದ್ರಿಯ ಯುದ್ಧ ಸ್ಮಾರಕದ ಸಮೀಪ, ಸರ್ಕ್ಯೂಟ್ ಹೌಸ್ ಪಕ್ಕದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಟ್ಯಾಂಕ್ ಪ್ರತಿಷ್ಠಾಪನೆಯಾಗಿದ್ದು, ಜುಲೈ 26ರ ಕಾರ್ಗಿಲ್ ವಿಜಯ್ ದಿವಸ್‌ದಂದು ಆಕರ್ಷಕ ವಿನ್ಯಾಸದೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ.

ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅನುಮೋದನೆಯ ಮೇರೆಗೆ ಈ ಯುದ್ಧ ಟ್ಯಾಂಕ್ ಮಂಗಳೂರಿಗೆ ಮಂಜೂರಾಗಿತ್ತು. 1961ರಿಂದ 2001ರವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಈ ಟಿ-55 ಟ್ಯಾಂಕ್ ಪುಣೆಯ ಭಾರತೀಯ ಸೇನಾ ಡಿಪೋದಲ್ಲಿದ್ದು, ಸುಮಾರು 40 ಟನ್ ತೂಕ ಹೊಂದಿದೆ. ಇದನ್ನು 2025ರ ಆಗಸ್ಟ್‌ನಲ್ಲಿ ವಿಶೇಷ ಟ್ರೇಲರ್ ಮೂಲಕ ಮಂಗಳೂರಿಗೆ ತರಲಾಗಿತ್ತು.

ಈ ಯುದ್ಧ ಟ್ಯಾಂಕ್ ಸ್ಥಾಪನೆಯಿಂದ ಮಂಗಳೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ದೇಶಕ್ಕಾಗಿ ಹೋರಾಡಿದ ಯೋಧರ ತ್ಯಾಗ, ಶೌರ್ಯ ಹಾಗೂ ಪರಾಕ್ರಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸ್ಮಾರಕವಾಗಿ ಇದು ಕಾರ್ಯನಿರ್ವಹಿಸಲಿದ್ದು, ಕರಾವಳಿ ಭಾಗದ ಯುವಜನರಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರುವ ಆಸಕ್ತಿ ಹೆಚ್ಚಿಸುವ ಉದ್ದೇಶವೂ ಇದರ ಹಿಂದಿದೆ.

ಪ್ರಸ್ತುತ ಟ್ಯಾಂಕ್‌ಗೆ ಆಕರ್ಷಕ ವಿನ್ಯಾಸ ನೀಡುವ ಹಾಗೂ ಸ್ಮಾರಕವನ್ನು ಸಾರ್ವಜನಿಕರ ವೀಕ್ಷಣೆಗೆ ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಕಾಮಗಾರಿಯ ಹೊಣೆಯನ್ನು ವ್ಯಾಗನ್ ಟ್ಯೂನೆನ್ ಸಂಸ್ಥೆಯ ಸಂಸ್ಥಾಪಕ ಸಂದೀಪ್ ಬಂಟ್ವಾಳ್ ನೇತೃತ್ವದ ತಂಡ ವಹಿಸಿಕೊಂಡಿದ್ದು, ಟ್ಯಾಂಕ್‌ಗೆ ಹೊಸ ಮೆರುಗು ನೀಡುವ ಕಾರ್ಯದಲ್ಲಿ ತೊಡಗಿದೆ. ಜುಲೈ 26ರಂದು ನಡೆಯಲಿರುವ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.


