ಬಿಸಿರೋಡು ಎನ್.ಜಿ. ಸರ್ಕಲ್ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ; ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ

ಬಂಟ್ವಾಳ: ಬಿಸಿರೋಡಿನ ಅತ್ಯಂತ ವಾಹನ ದಟ್ಟಣೆ ಇರುವ ಎನ್.ಜಿ. ಸರ್ಕಲ್ ಬಳಿ ಉಂಟಾಗಿದ್ದ ಹೊಂಡ-ಗುಂಡಿಗಳಿಂದ ಕಳೆದ ಹಲವು ದಿನಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಬೆಳಿಗ್ಗೆ ಕಚೇರಿ ಹಾಗೂ ಶಾಲಾ-ಕಾಲೇಜುಗಳ ಸಮಯದಲ್ಲಿ, ಸಂಜೆ ಕೆಲಸ ಮುಗಿಸಿ ಮನೆಗೆ ಮರಳುವ ವೇಳೆ ಇಲ್ಲಿ ವಾಹನಗಳ ಸಾಲು ಸಾಲಾಗಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತಿತ್ತು. ಕೆಲವೊಮ್ಮೆ ನೂರಾರು ಮೀಟರ್‌ಗಳಷ್ಟು ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.


ರಾಷ್ಟ್ರೀಯ ಚತುಷ್ಪಥ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕಾಂಕ್ರೀಟ್ ಹಾಕುವ ಉದ್ದೇಶದಿಂದ ಮಂಗಳೂರು ಸಂಪರ್ಕ ರಸ್ತೆಯ ಎನ್.ಜಿ. ಸರ್ಕಲ್ ಬಳಿ ರಸ್ತೆ ಅಗೆದ ಬಳಿಕ ಸರಿಯಾಗಿ ದುರಸ್ತಿ ಮಾಡದ ಕಾರಣ, ಮಳೆ ನೀರು ನಿಂತು ರಸ್ತೆ ದೊಡ್ಡ ಹೊಂಡವಾಗಿ ಮಾರ್ಪಟ್ಟಿತ್ತು. ಪ್ರತಿದಿನ ಸಾವಿರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ಹೊಂಡ ಮತ್ತಷ್ಟು ಆಳವಾಗಿ, ಅಪಾಯಕಾರಿಯಾಗಿ ಪರಿಣಮಿಸಿತ್ತು.


ಹೊಂಡಗಳನ್ನು ತಪ್ಪಿಸಲು ವಾಹನ ಸವಾರರು ಏಕಾಏಕಿ ವಾಹನ ತಿರುಗಿಸುವುದು, ವೇಗ ಕಡಿಮೆ ಮಾಡುವುದು ಹಾಗೂ ಎದುರು ಬದಿಗೆ ಚಲಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಇದರಿಂದ ಅಪಘಾತದ ಭೀತಿಯ ಜೊತೆಗೆ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿತ್ತು.
ಈ ನಡುವೆ ಟ್ರಾಫಿಕ್ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಹರಸಾಹಸ ಪಡುತ್ತಿದ್ದರು. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪೊಲೀಸರು ರಸ್ತೆಯಲ್ಲೇ ನಿಂತು ವಾಹನಗಳನ್ನು ನಿಯಂತ್ರಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಶ್ರಮಿಸುತ್ತಿದ್ದರೂ, ರಸ್ತೆಯ ದುಸ್ಥಿತಿಯಿಂದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತಿರಲಿಲ್ಲ.


ಇದೀಗ ಸಂಬಂಧಿಸಿದ ಇಲಾಖೆಯು ಹೊಂಡಗಳನ್ನು ಡಾಮರು ಹಾಕಿ ಮುಚ್ಚುವ ಕಾರ್ಯ ಆರಂಭಿಸಿದ್ದು, ವಾಹನ ಸವಾರರಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಆದರೆ ಈ ದುರಸ್ತಿ ಶಾಶ್ವತ ಪರಿಹಾರವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಹೊಸದಾಗಿ ಹಾಕಿರುವ ಡಾಮರು ಮತ್ತೆ ಎದ್ದು ಹೋಗುವ ಸಾಧ್ಯತೆ ಹೆಚ್ಚಿದ್ದು, ಎರಡು-ಮೂರು ದಿನಗಳ ಮಳೆಯಲ್ಲೇ ರಸ್ತೆ ಮತ್ತೆ ಹಳೆಯ ಸ್ಥಿತಿಗೆ ಮರಳುವ ಆತಂಕ ವ್ಯಕ್ತವಾಗಿದೆ.
ಸ್ಥಳೀಯರ ಪ್ರಕಾರ, ಇಂತಹ ತಾತ್ಕಾಲಿಕ ದುರಸ್ತಿಯಿಂದ ಸಮಸ್ಯೆ ಮರುಕಳಿಸುತ್ತಲೇ ಇರುತ್ತದೆ. ಮಳೆಗಾಲ ಮುಗಿದ ತಕ್ಷಣ ವೈಜ್ಞಾನಿಕ ವಿಧಾನದಲ್ಲಿ ಗುಣಮಟ್ಟದ ಕಾಂಕ್ರೀಟ್ ಅಥವಾ ಶಾಶ್ವತವಾಗಿ ಉಳಿಯುವಂತಹ ಡಾಮರು ಕಾಮಗಾರಿ ಕೈಗೊಂಡು ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಬಿಸಿರೋಡು ಎನ್.ಜಿ. ಸರ್ಕಲ್ ಬಂಟ್ವಾಳದ ಪ್ರಮುಖ ಸಂಚಾರ ಕೇಂದ್ರವಾಗಿದ್ದು, ಇಲ್ಲಿ ಶಾಶ್ವತ ರಸ್ತೆ ನಿರ್ಮಾಣವೇ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳ ಅಪಾಯವನ್ನು ಕಡಿಮೆ ಮಾಡುವ ಏಕೈಕ ಪರಿಹಾರವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!