ಬಂಟ್ವಾಳದಲ್ಲಿ ಪತ್ರಿಕಾ ದಿನಾಚರಣೆ: ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ, ಗುರುತುಚೀಟಿ ವಿತರಣೆ

ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಬುಧವಾರ ಬಿ.ಸಿ.ರೋಡಿನ ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸಿ, ಸಂಘದ ಸದಸ್ಯರಿಗೆ ಗುರುತುಚೀಟಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಅನಂತಪದ್ಮನಾಭ ಮಾತನಾಡಿ, ಪತ್ರಕರ್ತರ ವರದಿಗಳು ಸಮಾಜಕ್ಕೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಜಾಗೃತಿ ಮೂಡಿಸಿ ಸಮಾಜದ ದಿಕ್ಕನ್ನು ಬದಲಿಸುವ ಶಕ್ತಿಯನ್ನೂ ಹೊಂದಿವೆ ಎಂದು ಹೇಳಿದರು. ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಗಳಿದ್ದಂತೆ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಪರಸ್ಪರ ಸಹಕಾರದಿಂದ ಅಪರಾಧ ತಡೆ ಹಾಗೂ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು. ಸಾರ್ವಜನಿಕರು ತುರ್ತು ಸಹಾಯವಾಣಿ 112ರ ಸದುಪಯೋಗ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಸಮಾಜದ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ನಿವೃತ್ತಿಯ ಬಳಿಕ ಪಿಂಚಣಿ ಸೇರಿದಂತೆ ಸಮರ್ಪಕ ಸೌಲಭ್ಯಗಳು ದೊರೆಯದಿರುವುದು ವಿಷಾದನೀಯ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಬದಲಾವಣೆ ತರಲು ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದರು.

ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಪತ್ರಕರ್ತರಿಗೆ ಬಸ್ ಪಾಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘ ಕೈಗೊಂಡಿರುವ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಸರಗೋಡು ಕ್ಷೇಮಾಭಿವೃದ್ಧಿ ಕನ್ನಡ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪುರಸ್ಕೃತ ಹರೀಶ್ ಮಾಂಬಾಡಿ ಹಾಗೂ 2024ನೇ ಸಾಲಿನ ಕೆಯುಡಬ್ಲ್ಯುಜೆ ರಾಜ್ಯಮಟ್ಟದ ಉತ್ತಮ ವರದಿ ಪ್ರಶಸ್ತಿ ವಿಜೇತ ಅಬ್ದುಲ್ ರಹಿಮಾನ್ ತಲಪಾಡಿ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಪುತ್ತೂರಿಗೆ ವರ್ಗಾವಣೆಗೊಂಡ ಉದಯವಾಣಿ ಹಿರಿಯ ವರದಿಗಾರ ಕಿರಣ್ ಸರಪಾಡಿ ಅವರಿಗೆ ಬೀಳ್ಕೊಡುಗೆ ನೀಡಿ, ಬಂಟ್ವಾಳಕ್ಕೆ ನೂತನ ಹಿರಿಯ ವರದಿಗಾರರಾಗಿ ಆಗಮಿಸಿದ ದಿನೇಶ್ ಇರಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಲಿ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸದಸ್ಯ ಹರೀಶ್ ಮಾಂಬಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮೇಶ್ ಕೆ. ಪುಣಚ, ಕೋಶಾಧಿಕಾರಿ ಚಂದ್ರಶೇಖರ ಕಲ್ಮಲೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಶಂಕರ ನೀರ್ಪಾಜೆ, ರತ್ನದೇವ್ ಪುಂಜಾಲಕಟ್ಟೆ, ವೆಂಕಟೇಶ ಬಂಟ್ವಾಳ ಹಾಗೂ ಸದಸ್ಯರಾದ ಗಣೇಶ್ ಪ್ರಸಾದ್ ಪಾಂಡೇಲು, ಯಾದವ ಕುಲಾಲ್ ಅಗ್ರಬೈಲ್, ಕಿಶೋರ್ ಪೆರಾಜೆ, ನಿಶಾಕಿರಣ್ ಬಾಳೆಪುಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!