ಮಂಜೇಶ್ವರ : ಕುಂಬಳೆಯಲ್ಲಿ ಮನೆ ಯಜಮಾನ ಹಾಗೂ ಕುಟುಂಬವನ್ನು ಬಂಧಿಯನ್ನಾಗಿಸಿ 42 ಪವನ್ ಚಿನ್ನ ಮತ್ತು ಕಾಲು ಲಕ್ಷ ರೂಪಾಯಿ ದೋಚಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ.

ಕರ್ನಾಟಕ ಮೂಲದ ಸಂಭ್ಯ ಅಸೀಸ್ ಎಂಬ ಅಬ್ದುಲ್ ಅಸೀಸ್ (58) ಎಂಬಾತನನ್ನು ಕಾಸರಗೋಡು ಕ್ರೈಂ ಬ್ರಾಂಚ್ ತಂಡವು ಪುತ್ತೂರಿನಲ್ಲಿ ವಶಕ್ಕೆ ತೆಗೆದುಕೊಂಡಿದೆ.
2012 ಡಿಸೆಂಬರ್ 22ರ ರಾತ್ರಿ ಈ ದರೋಡೆ ನಡೆದಿತ್ತು. ಕುಂಬಳ ಅನಿಲ್ ಕುಂಬ್ಳೆ ರಸ್ತೆಯ ವಾಸಿ, ಮಂಗಳೂರು ಟ್ರಾನ್ಸ್‌ಪೋರ್ಟ್ ಆಪರೇಟರ್ ರಾಜೇಶ್ ಶೆಣೈ (44) ಅವರ ಮನೆಗೆ ನುಗ್ಗಿದ ಮುಖವಾಡ ಧರಿಸಿದ ತಂಡವು, ಗೃಹಪತಿಯ ಮುಖಕ್ಕೆ ದ್ರವವನ್ನು ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಚಿನ್ನ ಹಾಗೂ ಹಣವನ್ನು ಕಳವು ಮಾಡಿತ್ತು. ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದ ಕುಟುಂಬದ ಸ್ನೇಹಿತರು ಈ ಘಟನೆಯನ್ನು ಹೊರಹಾಕಿದ್ದರು.

ಈ ಪ್ರಕರಣದಲ್ಲಿ ಈ ಹಿಂದೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳಲ್ಲಿ ಪ್ರಮುಖನಾದ ಅಸೀಸ್ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕ್ರೈಂ ಬ್ರಾಂಚ್ ಡಿವೈ.ಎಸ್.ಪಿ ಪಿ. ಮಧುಸೂದನ್ ನಾಯರ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.


