ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕುವ ಉದ್ದೇಶದಿಂದ ದೌರ್ಜನ್ಯ- ಪ್ರೊ. ಫಣಿರಾಜ್

ಉಡುಪಿ: ಹೊಸದಿಲ್ಲಿಯಲ್ಲಿ ನೀಟ್ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ಎಸ್‌ಐಒ ಹಾಗೂ ಉಡುಪಿ ಜಿಲ್ಲಾ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಹಬಾಳ್ವೆ ಸಂಘಟನೆಯ ಚಿಂತಕ ಪ್ರೊ. ಫಣಿರಾಜ್, ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲದೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ಬದ್ಧತೆಯೂ ಕಾಣುತ್ತಿಲ್ಲ ಎಂದು ಆರೋಪಿಸಿದರು. ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ. ಆದ್ದರಿಂದ ದೇಶದಾದ್ಯಂತ ಪ್ರಜಾಪ್ರಭುತ್ವದ ಪರ ಧ್ವನಿಯೆತ್ತಬೇಕು. ಇದು ಯಾವುದೇ ರಾಜಕೀಯ ಪಕ್ಷದ ಹೋರಾಟವಲ್ಲ, ಸಂವಿಧಾನದ ಮೌಲ್ಯಗಳನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಅವರು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ್ ಗಿಳಿಯಾರು, ಹೋರಾಟಗಾರ ಸಂವರ್ತ್ ಸಾಹಿಲ್ ಹಾಗೂ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ನಿಹಾಲ್ ಕಿದಿಯೂರು ಮಾತನಾಡಿದರು.
ಪ್ರತಿಭಟನೆಯಲ್ಲಿ ಹುಸೇನ್ ಕೋಡಿಬೆಂಗ್ರೆ, ಸುಂದರ್ ಮಾಸ್ತರ್, ಅಯಾನ್ ಮಲ್ಪೆ, ಮುಹಮ್ಮದ್ ಮೌಲ, ಇಸ್ಮಾಯಿಲ್ ಕಟಪಾಡಿ, ಶ್ಯಾಮ್‌ರಾಜ್ ಬಿರ್ತಿ, ಹೈಫಾ, ಅಝೀಜ್ ಉದ್ಯಾವರ, ನಿಸಾರ್ ಉಡುಪಿ, ಮಂಜುನಾಥ್ ಬಾಳ್ಕದ್ರು, ಹುಮೇರಾ ಕಾರ್ಕಳ, ಸುನೀಲ್ ಡಿ. ಬಂಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!