ಪೌಷ್ಟಿಕ ಆಹಾರದ ಮಹತ್ವ ಸಾರಿದ ‘ಪೋಷಣ್ ಮಾ–2026’: ಮಂಜೇಶ್ವರದಲ್ಲಿ ಅದ್ಧೂರಿ ‘ಪೋಷಣ್ ಮೇಳ’ಆಚರಣೆ

​ಮಂಜೇಶ್ವರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐ.ಸಿ.ಡಿ.ಎಸ್. ಮಂಜೇಶ್ವರ ಕಚೇರಿಯ ಜಂಟಿ ಆಶ್ರಯದಲ್ಲಿ ‘ಪೋಷಣ್ ಮಾ–2026’ ಆಚರಣೆಯ ಭಾಗವಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ‘ಪೋಷಣ್ ಮೇಳ’ ವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.ಈ ಮಹತ್ವದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಯು.ಕೆ. ಸೈಫುಲ್ಲಾ ತಂಗಳ್ ಉದ್ಘಾಟಿಸಿದರು.ಕಾರ್ಯಕ್ರಮದ ಅಂಗವಾಗಿ ಮಂಜೇಶ್ವರ ಐ.ಸಿ.ಡಿ.ಎಸ್. ವ್ಯಾಪ್ತಿಯ 126 ಅಂಗನವಾಡಿಗಳ ಕಾರ್ಯಕರ್ತೆಯರು ಭಾಗವಹಿಸಿದ ಆಕರ್ಷಕ ಮೆರವಣಿಗೆ ನಡೆಯಿತು.

ಅಲ್ಲದೆ, ಕಾರ್ಯಕರ್ತೆಯರು ಸ್ವತಃ ತಯಾರಿಸಿ ಪ್ರದರ್ಶಿಸಿದ ಪೌಷ್ಟಿಕಾಂಶಯುಕ್ತ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು.ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರ-ಕಿಶೋರಿಯರಲ್ಲಿ ಹೆಚ್ಚಾಗಿ ಕಂಡುಬರುವ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದೇ ಈ ಪೋಷಣ್ ಮಾಸದ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಸದಸ್ಯರಾದ ಬಶೀರ್ ಕುಟ್ಟೂಡಲ್, ಜ್ಯೋತಿ ಪಿ. ರೈ ಹಾಗೂ ಸೂಪರ್‌ವೈಸರ್ ಬಿಂದು ಉಪಸ್ಥಿತರಿದ್ದು ಪ್ರಾಸಂಗಿಕವಾಗಿ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬ್ಲಾಕ್ ಪಂಚಾಯತ್‌ನ ಹಲವು ಅಧಿಕಾರಿಗಳು ಭಾಗವಹಿಸಿದ್ದರು.ಸಿ.ಡಿ.ಪಿ.ಒ. ಗೀತಾ ಕುಮಾರಿ ಎಲ್ಲರನ್ನೂ ಸ್ವಾಗತಿಸಿದರೆ, ಸೂಪರ್‌ವೈಸರ್ ಸುಚಿತ ವಂದನಾರ್ಪಣೆ ಸಲ್ಲಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!