ಕಾಸರಗೋಡು : ಬದಿಯಡ್ಕದ ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಯಿಂದ ಕಳವು ಮಾಡಲಾಗಿದ್ದ ಮೂರು ಲ್ಯಾಪ್ಟಾಪ್ಗಳು ಕಚೇರಿಯ ಸಮೀಪದ ಪೊದೆಗಳಲ್ಲಿ ಅನಾಥವಾಗಿ ಪತ್ತೆಯಾಗಿವೆ.

ಕಳೆದ ಸೋಮವಾರ ರಾತ್ರಿ ಕಚೇರಿಯ ಬಾಗಿಲು ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು ಲ್ಯಾಪ್ಟಾಪ್ಗಳನ್ನು ದೋಚಿದ್ದರು.ಮಂಗಳವಾರ ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದ್ದು, ಗ್ರಾಮ ಅಧಿಕಾರಿ ಶಶಿಕುಮಾರ್ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬಳಿಕ ನಡೆಸಿದ ತೀವ್ರ ಶೋಧನೆಯಲ್ಲಿ ಕಳುವಾದ ಲ್ಯಾಪ್ಟಾಪ್ಗಳು ಸಮೀಪದ ಪೊದೆಗಳ ನಡುವೆ ಸಿಕ್ಕಿವೆ.ಘಟನೆಗೆ ಸಂಬಂಧಿಸಿದಂತೆ ಇನ್ನೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಈ ಕುರಿತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

