ಮರಣದವಡೆಗೆ ದಾರಿಮಾಡಿಕೊಟ್ಟ ತಲಪಾಡಿ ಟೋಲ್ ಅಕ್ಕಪಕ್ಕ: ರಸ್ತೆ ಒತ್ತುವರಿ ಮಾಡಿ ನಿಲ್ಲುವ ಘನ ವಾಹನಗಳು, ಕಣ್ಣುಮುಚ್ಚಿ ಕುಳಿತ ಆಡಳಿತ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಟೋಲ್ ಗೇಟ್ ದಾಟಿ ಸ್ವಲ್ಪ ಮುನ್ನಡೆದರೆ ಸಾಕು, ಅಲ್ಲಿ ಸಾವಿನ ದೂತರು ಹೊಂಚುಹಾಕಿ ಕುಳಿತಿರುವ ದೃಶ್ಯ ಕಣ್ಣಿಗೆ ರಾಚುತ್ತದೆ. ರಸ್ತೆಯ ಎಡಭಾಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ರಾತ್ರಿ ಹಾಗೂ ಹಗಲು ಎನ್ನದೆ ಮನಸೋಇಚ್ಛೆ ನಿಲ್ಲಿಸಲಾಗುತ್ತಿರುವ ಘನ ವಾಹನಗಳು ಇಂದು ಸ್ಥಳೀಯರಿಗೆ ಮತ್ತು ಸವಾರರಿಗೆ ದೊಡ್ಡ ಶಾಪವಾಗಿ ಪರಿಣಮಿಸಿವೆ.
​ಟೋಲ್ ಗೇಟ್‌ನ ಸಮೀಪವಿರುವ ಹೋಟೆಲ್‌ಗಳು ಮತ್ತು ಇತರ ವ್ಯಾಪಾರ ಕೇಂದ್ರಗಳಿಗೆ ಬರುವ ಗ್ರಾಹಕರು ಹಾಗೂ ಕಾಸರಗೋಡು ಕಡೆಗೆ ಮರಳುವ ವಾಹನ ಸವಾರರಿಗೆ ಈ ನಿಂತಿರುವ ಬೃಹತ್ ಲಾರಿ ಹಾಗೂ ಕಂಟೈನರ್‌ಗಳು ಭಾರೀ ಗೋಚರತಾ ತಡೆಯನ್ನು ಉಂಟುಮಾಡುತ್ತಿವೆ.

ಟೋಲ್ ಗೇಟ್ ಕಡೆಯಿಂದ ಅತಿವೇಗವಾಗಿ ಧಾವಿಸಿ ಬರುವ ವಾಹನಗಳು ಈ ಒತ್ತುವರಿ ಮಾಡಲಾದ ವಾಹನಗಳ ಮರೆಯಲ್ಲಿ ಮುಚ್ಚಿಹೋಗುವುದರಿಂದ, ರಸ್ತೆ ದಾಟುವ ಅಥವಾ ರಸ್ತೆಗೆ ತಿರುವು ಪಡೆಯುವ ಸವಾರರಿಗೆ ವಾಹನಗಳು ಬರುವುದು ಕೊನೆಕ್ಷಣದವರೆಗೂ ಅರಿಕೆಗೇ ಬರುವುದಿಲ್ಲ.

ಪರಿಣಾಮವಾಗಿ, ಇಲ್ಲಿ ನಿತ್ಯವೂ ಜೀವಭಯದ ನಡುವೆಯೇ ಪ್ರಯಾಣಿಸುವಂತಾಗಿದ್ದು, ಈಗಾಗಲೇ ಹಲವು ಅಪಘಾತಗಳು ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ನಾಗರಿಕರು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಅಥವಾ ಸಣ್ಣಪುಟ್ಟ ದಾಖಲೆಗಳ ವ್ಯತ್ಯಾಸವಿದ್ದರೆ ಸಾಕು, ರಸ್ತೆ ಬದಿಯಲ್ಲಿ ಹೊಂಚುಹಾಕಿ ಕುಳಿತುಕೊಳ್ಳುವ ಪೊಲೀಸ್ ಇಲಾಖೆ ಈಗ ಎಲ್ಲಿ ಮಲಗಿದೆ? ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಜನದಟ್ಟಣೆಯ ಹೆದ್ದಾರಿಯಲ್ಲಿ ರಸ್ತೆಯ ಅರ್ಧ ಭಾಗವನ್ನು ಆಕ್ರಮಿಸಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಈ ಘನ ವಾಹನಗಳ ಅಕ್ರಮ ನಿಲುಗಡೆ ಪೊಲೀಸರ ಕಣ್ಣಿಗೆ ಬೀಳುತ್ತಿಲ್ಲವೇ? ಅಥವಾ ಇಲ್ಲಿ ಇಲಾಖೆಯ ಕಣ್ಣು ಕುರುಡಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ತೀವ್ರವಾಗಿ ಕೇಳಿಬರುತ್ತಿದೆ.

​ಇನ್ನು ಜನಸಾಮಾನ್ಯರ ಜೇಬು ಕತ್ತರಿಸಲು ಸದಾ ಸಿದ್ಧರಿರುವ ಟೋಲ್ ಗೇಟ್ ಅಧಿಕಾರಸ್ಥರಿಗೂ ಈ ಅವ್ಯವಸ್ಥೆ ಕಾಣುತ್ತಿಲ್ಲವೇ? ಟೋಲ್ ಗೇಟ್‌ನ ತತಂಗದ ವ್ಯಾಪ್ತಿಯಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೆದ್ದಾರಿ ಒತ್ತುವರಿಯಾಗಿ ವಾಹನಗಳು ನಿಲ್ಲುತ್ತಿದ್ದರೂ ಇಲಾಖೆಗಳ ಮೌನ ಒಳಒಪ್ಪಂದದ ಸಂಶಯಕ್ಕೆ ಕಾರಣವಾಗಿದೆ.

​ ಇನ್ನಾದರೂ ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಯಾವುದೇ ದೊಡ್ಡ ದುರಂತ ಸಂಭವಿಸಿ ಜೀವಹಾನಿಯಾಗುವ ಮುನ್ನ ಈ ಅಕ್ರಮ ವಾಹನ ನಿಲುಗಡೆಯನ್ನು ತಡೆದು, ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಪರಿಣಾಮಗಳಿಗೆ ಇಲಾಖೆಗಳೇ ನೇರ ಹೊಣೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!