ದೆಹಲಿ ಮತ್ತು ಮುಂಬೈ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ದೇಶದಾದ್ಯಂತ ಗಮನ ಸೆಳೆದ ಚಿತ್ರಗಳಲ್ಲಿ ಒಂದಾಗಿದ್ದು ರಿಯಾ ಅಹಿರ್ ಅವರದ್ದು. ಧಾರಾಕಾರ ಮಳೆಯನ್ನೂ ಲೆಕ್ಕಿಸದೆ, ಮುಂಬೈ ಪೊಲೀಸರ ವಾಹನದ ಮುಂದೆ ಒಬ್ಬರೇ ನಿಂತು ಅದನ್ನು ತಡೆದ ಅವರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ದಾದರ್ನ ಶಿವಾಜಿ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ, ರಿಯಾ ಒಬ್ಬರೇ ವಾಹನದ ಮುಂದೆ ನಿಂತು ಪ್ರತಿಭಟಿಸಿದ್ದರು. ಮಳೆಯ ನಡುವೆ ಹುಡಿ ಮತ್ತು ಟೋಪಿ ಧರಿಸಿ ವಾಹನದ ಎದುರು ನಿಂತಿದ್ದ ಅವರ ಚಿತ್ರ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.
ಆದರೆ ಇದೀಗ ತಮ್ಮ ವಿರುದ್ಧ ನಡೆಯುತ್ತಿರುವ ನಿರಂತರ ಆನ್ಲೈನ್ ದ್ವೇಷ ಅಭಿಯಾನಕ್ಕೆ ಸಂಬಂಧಿಸಿದಂತೆ 27 ವರ್ಷದ ರಿಯಾ ಅಹಿರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾಗಿರುವುದರ ಜೊತೆಗೆ, ತಮ್ಮ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸಂಚು ರೂಪಿಸಿ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ರಿಯಾ ಆರೋಪಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಸಂದರ್ಭದ ಹಳೆಯ ಫೋಟೋಗಳು ಹಾಗೂ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳನ್ನು ತಿರುಚಿ, ತಪ್ಪು ಅರ್ಥ ಬರುವಂತೆ ಆನ್ಲೈನ್ನಲ್ಲಿ ಹರಿಬಿಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮನ್ನೂ ತಮ್ಮ ಕುಟುಂಬದ ಸದಸ್ಯರನ್ನೂ ಅವಮಾನಿಸುವ ಉದ್ದೇಶದಿಂದಲೇ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ರಿಯಾ ಆರೋಪಿಸಿದ್ದಾರೆ. ದೂರು ದಾಖಲಾದ ಬಳಿಕ ಪೊಲೀಸ್ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ರಿಯಾ ತಿಳಿಸಿದ್ದಾರೆ.

