ಕಾಸರಗೋಡು : ಯುವ ಪೀಳಿಗೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಮಾದಕ ದ್ರವ್ಯ ವ್ಯಾಪಾರಿಗಳನ್ನು ಬಗ್ಗುಬಡಿಯಲು ಇಡೀ ಸಮಾಜವೇ ‘ಆಪರೇಷನ್ ತೂಫಾನ್ ವಾರಿಯರ್ಸ್’ ಆಗಿ ನಿಲ್ಲಬೇಕು ಎಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತಲ ಕರೆ ನೀಡಿದ್ದಾರೆ.

ವಿದ್ಯಾನಗರದ ಶಾಲೆಯಲ್ಲಿ ‘ಆಪರೇಷನ್ ತೂಫಾನ್’ ಜನಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಯಂದಿರ ಕಣ್ಣೀರು ಮತ್ತು ಕುಟುಂಬಗಳ ಛಿದ್ರತೆ ಗಮನಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

ಸರ್ಕಾರವಿರುವವರೆಗೆ ಈ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಗಡಿಯಾಚೆಗಿನ ಅಕ್ರಮ ತಡೆಯಲು ಕಾವಲು ಕಾಯಲಾಗುತ್ತಿದ್ದು, ಈ ಕುರಿತು ಕರ್ನಾಟಕ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಭೆಯಲ್ಲಿ ಪ್ರತಿಜ್ಞೆ ಬೋಧಿಸಿದರು.

ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


