ಅನ್ಯ ಇಲಾಖೆಯ ಕೆಲಸ ವಹಿಸದಂತೆ ಮತ್ತು ಹೊರಡಿಸಿದ ಅದೇಶ ಹಿಂಪಡೆಯುವಂತೆ ಗ್ರಾ. ಪಂ. ಸಿಬ್ಬಂದಿಗಳ ಮನವಿ

ಬಂಟ್ವಾಳ: ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ನಿಯೋಜಿಸಿರುವ ಆದೇಶವನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಶ್ರೇಯೋಭಿವೃದ್ದಿ ಸಂಘ ( ಆರ್.ಡಿ.ಪಿ.ಆರ್.) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ತಾ.ಪಂ.ನ ಆಡಳಿತ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ ಶಂಕರ್ ಅಳ್ವ ಅವರ ಮೂಲಕ ಮನವಿ ಸಲ್ಲಿಸಿದೆ.

ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರಿಗೆ ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ವಿತರಿಸುವ ಸಂಬಂಧ ಹೊರಡಿಸಿರುವ ಜ್ಞಾಪನ ಪತ್ರದ ಅನ್ವಯ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಗ್ರಾಮ ಪಂಚಾಯತ್ ಸಿಬ್ಬಂದಿ ಈಗಾಗಲೇ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ತುರ್ತು ಕಾರ್ಯ, ಎಸ್‌ಐಆರ್ (SIR) ಪ್ರಕ್ರಿಯೆ, ಬಿಎಲ್‌ಒ ಕರ್ತವ್ಯ, ಜನಗಣತಿ, ಡಿಸಿಎಚ್‌ಬಿ (DCHB) ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ವಿಬಿಜಿ, ರಾಮ್‌ಜಿ ಮಾನವ ದಿನಗಳ ಗುರಿ, ಮನೆ ತೆರಿಗೆ ಸಂಗ್ರಹ, ನೀರಿನ ತೆರಿಗೆ ಮೀಟರ್‌ ರೀಡಿಂಗ್, ಸಾಮಾಜಿಕ ಲೆಕ್ಕಪರಿಶೋಧನೆ, ಸ್ಥಳೀಯ ಲೆಕ್ಕಪರಿಶೋಧನೆ, ಅದಾಲತ್ ಸಭೆಗಳು, 11-ಬಿ ಖಾತೆ ಅಭಿಯಾನ, ಗ್ರಾಮಸಭೆ, ವಿಶೇಷ ಗ್ರಾಮಸಭೆ ಹಾಗೂ ಪ್ರತಿ ತಿಂಗಳ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಯಾಗಿದ್ದು, ಈ ಹೆಚ್ಚುವರಿ ಕರ್ತವ್ಯಕ್ಕೆ ಯಾವುದೇ ಗೌರವಧನ ಅಥವಾ ಭತ್ಯೆ ನೀಡುವ ಕುರಿತು ಆದೇಶದಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಅನ್ಯ ಇಲಾಖೆಗಳ ಯಾವುದೇ ಕೆಲಸವನ್ನು ವಹಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕಿನ ನೌಕರರ ಸಂಘದ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!