ಮಂಗಳೂರು: ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಬಶೀರ್, ಅವಹೇಳನಕಾರಿ, ಪ್ರಚೋದನಕಾರಿ ಹಾಗೂ ಅಸಭ್ಯ ಭಾಷೆಯ ಬಳಕೆ ಜನಪ್ರತಿನಿಧಿಯ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವ ಬದಲು ವೈಯಕ್ತಿಕ ನಿಂದನೆ, ಬೆದರಿಕೆ ಹಾಗೂ ದ್ವೇಷದ ಭಾಷೆಯನ್ನು ಬಳಸುವುದು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಅಪಾಯವಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಯಶ್‌ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು ಸಾರ್ವಜನಿಕರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ಪ್ರಜಾಪ್ರಭುತ್ವದ ಮಾರ್ಗದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಸಂಘಟಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯದಲ್ಲಿ ವಿಚಾರಗಳ ಆಧಾರದಲ್ಲಿ ಹೋರಾಡಬೇಕು ಹೊರತು ವೈಯಕ್ತಿಕ ನಿಂದನೆ ಹಾಗೂ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಅಲ್ಲ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನಡೆದುಕೊಳ್ಳುವಂತೆ ಯಶ್‌ಪಾಲ್ ಸುವರ್ಣ ಅವರಿಗೆ ಸ್ಪಷ್ಟ ಎಚ್ಚರಿಕೆ ನೀಡಿರುವುದಾಗಿ ಮೊಹಮ್ಮದ್ ಬಶೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


