ವಾಷಿಂಗ್ಟನ್: ಅಮೆರಿಕ ಮತ್ತು ಸೌದಿ ಅರೇಬಿಯಾ ಸೇನೆಗಳು ಇರಾನ್ ಬೆಂಬಲಿತ ಮಿಲಿಷಿಯಾಗಳು ಬಳಸುತ್ತಿದ್ದ ಇರಾಕ್ನ ಹಲವು ನೆಲೆಗಳ ಮೇಲೆ ಜಂಟಿ ವಾಯುದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಅಮೆರಿಕದ ಪಡೆಗಳು ಹಾಗೂ ಸೌದಿ ತೈಲ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದು, ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿದಿರುವುದಾಗಿ CENTCOM ಸ್ಪಷ್ಟಪಡಿಸಿದೆ.

ಕಳೆದ 72 ಗಂಟೆಗಳಲ್ಲಿ ಇರಾನ್ ಬೆಂಬಲಿತ ಮಿಲಿಷಿಯಾಗಳು 30ಕ್ಕೂ ಹೆಚ್ಚು ಡ್ರೋನ್ ದಾಳಿಗಳನ್ನು ನಡೆಸಿದ್ದವು ಎಂದು CENTCOM ಆರೋಪಿಸಿದೆ. ಇದೇ ವೇಳೆ, ಸೌದಿ ಅರೇಬಿಯಾ ತನ್ನ ಪೂರ್ವ ಭಾಗದ ತೈಲ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಉಡಾಯಿಸಲಾದ ಡ್ರೋನ್ಗಳನ್ನು ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ತಿಳಿಸಿದೆ. ಆದರೆ, ಈ ಆರೋಪವನ್ನು ಇರಾನ್ ಬೆಂಬಲಿತ “ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್” ಸಂಘಟನೆ ತಳ್ಳಿಹಾಕಿದ್ದು, ದಾಳಿಯ ಹಿಂದೆ ಯೆಮೆನ್ನ ಹೌತಿ ಬಂಡುಕೋರರು ಇರಬಹುದು ಎಂದು ಹೇಳಿದೆ.

ಇನ್ನೊಂದೆಡೆ, ಹೌತಿ ಬಂಡುಕೋರರು ಸೌದಿ ಅರೇಬಿಯಾದ NCC Ghazal ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆಸಿ ಹಿಂದಿರುಗುವಂತೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ದಕ್ಷಿಣ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಟ್ಯಾಂಕರ್ ಸಮೀಪ ಸ್ಫೋಟ ಸಂಭವಿಸಿದ್ದರೂ ಹಡಗು ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಯುನೈಟೆಡ್ ಕಿಂಗ್ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿಯೂ ಮತ್ತೆ ಉದ್ವಿಗ್ನತೆ ಹೆಚ್ಚಿದ್ದು, ಕೆಲವು ಹಡಗುಗಳು ಅಮೆರಿಕದ ನೌಕಾಪಡೆಯ ಭದ್ರತೆಯಲ್ಲಿ ಪರ್ಯಾಯ ಮಾರ್ಗ ಬಳಸುತ್ತಿವೆ.

ಈ ಬೆಳವಣಿಗೆಗಳ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೈಟ್ ಹೌಸ್ನಲ್ಲಿ ಭೇಟಿ ಮಾಡಿ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಕುರಿತು ಚರ್ಚಿಸಿದರು. ಇದೇ ವೇಳೆ, ನಿರಂತರ ಕ್ಷಿಪಣಿ ಪ್ರತಿಬಂಧಕ ಕಾರ್ಯಾಚರಣೆಗಳಿಂದ ಅಮೆರಿಕದ ಶಸ್ತ್ರಾಸ್ತ್ರ ಸಂಗ್ರಹ ಕಡಿಮೆಯಾಗುತ್ತಿದೆ ಎಂಬ ವರದಿಗಳ ನಡುವೆಯೂ, ಅಧ್ಯಕ್ಷರು ಸೂಚಿಸುವ ಯಾವುದೇ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಸಾಮರ್ಥ್ಯ ಅಮೆರಿಕದ ಬಳಿ ಇದೆ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.


