ಬಂಟ್ವಾಳ ಅಮ್ಮುಂಜೆ ನಿವಾಸಿಯಾದ ವೃದ್ದೆ ಬೆನಡಿಕ್ಟ್ ಕಾರ್ಲೋ (73) ಎಂಬವರ ಆರೈಕೆ ನೋಡಿಕೊಳ್ಳುತ್ತಿದ್ದ ಆರೋಪಿತೆ ಬಂಟ್ವಾಳ ಅಮ್ಟಾಡಿ ನಿವಾಸಿ ಕು.ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23)ಎಂಬಾಕೆಯು, ವೃಧ್ದೆಯ ಬಳಿಯಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡುವ ಉದ್ದೇಶದಿಂದ, ತನ್ನ ಸ್ನೇಹಿತ ಬಂಟ್ವಾಳ ನರಿಕೊಂಬು ನಿವಾಸಿ ಸತೀಶ ನಾಯಕ್ (28) ಎಂಬಾತನ ಸಹಾಯದಿಂದ ವೃದ್ದೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿ, ಅದರಲ್ಲಿ ಸಫಲರಾಗದಿದ್ದಾಗ ಮತ್ತೋರ್ವ ಆರೋಪಿ ಬಂಟ್ವಾಳ ನರಿಕೊಂಬು ನಿವಾಸಿ ಚರಣ್ ಕುಮಾರ್ (31) ಎಂಬಾತನ ಸಹಾಯದಿಂದ ದಿನಾಂಕ: 25-01-21 ರಂದು ರಾತ್ರಿ, ಬೆನಡಿಕ್ಟ್ ಕಾರ್ಲೋರವರನ್ನು ಉಸಿರುಗಟ್ಟಿಸಿ ಕೊಲೆಗೈದು ಒಟ್ಟು 61.070ಗ್ರಾಂ ತೂಕದ (ಅಂದಿನ ರೂ.03 ಲಕ್ಷ ಮೌಲ್ಯ) ಚಿನ್ನಾಭರಣಗಳನ್ನು ಸುಲಿಗೆ ಮಾಡಿ, ಸಾಕ್ಷಿ ನಾಶಪಡಿಸಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ22/2021, ಕಲಂ: 302, 392, 120 (ಬಿ), 201 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದಲ್ಲಿ ಆಗಿನ ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಪ್ರಸನ್ನ ಎಮ್.ಎಸ್ ರವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆಗಿನ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಡಿ. ನಾಗರಾಜ್ ರವರು ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ, ಸದ್ರಿ ಮೂವರು ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.

ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಂಗಳೂರಿನಲ್ಲಿ ಪ್ರಕರಣದ ವಿಚಾರಣೆ ನಡೆದು, ದಿನಾಂಕ: 28-07-2026ರಂದು ಮಾನ್ಯ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ರವರು ಪ್ರಕರಣದ ಮೂವರೂ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ಸರಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ್ ನಾಯಕ್ ರವರು ಮಾನ್ಯ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡನೆ ನಡೆಸಿರುತ್ತಾರೆ.


