ಕುಸಿದು ಬಿದ್ದ ದೇರಂಬಳ ಸೇತುವೆಗೆ ಯಂಗ್ ಡೆಮೋಕ್ರಾಟ್ಸ್ ಜಿಲ್ಲಾ ನಾಯಕರು ಭೇಟಿ

ಕಾಸರಗೋಡು: ಮೀಂಜ ಗ್ರಾಮ ಪಂಚಾಯತು ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತನ್ನು ಸಂಪರ್ಕಿಸುವ ದೇರಂಬಳ ಸೇತುವೆ ಕುಸಿದು ನಾಲ್ಕು ವರ್ಷಗಳಾದರೂ ಅದರ ಮರುನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಯಂಗ್ ಡೆಮೋಕ್ರಾಟ್ಸ್ ಕಾಸರಗೋಡು ಜಿಲ್ಲಾ ನಾಯಕರು ಪ್ರತಿಭಟನೆ ವ್ಯಕ್ತಪಡಿಸಿದರು.

ಪ್ರಸ್ತುತ ಕುಸಿದಿರುವ ಸೇತುವೆಯ ಮೇಲ್ಭಾಗದಲ್ಲಿ ಕಂಗಿನ ದಿಮ್ಮಿಗಳನ್ನು ಬಳಸಿ ನಿರ್ಮಿಸಿರುವ ತಾತ್ಕಾಲಿಕ ಕಾಲುದಾರಿಯ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ. ಕಳೆದ ದಿವಸವು ಯುವತಿಯೋರ್ವಳು ನದಿಗೆ ಬಿದ್ದ ಸಂದರ್ಭದಲ್ಲಿ ಸಮೀಪದಲ್ಲಿದ್ದ ರೈತನು ಸಮಯೋಚಿತವಾಗಿ ರಕ್ಷಣಾ ಕಾರ್ಯ ನಡೆಸಿದ್ದರಿಂದ ದೊಡ್ಡ ದುರಂತ ತಪ್ಪಿತು. ಆದರೂ ಈ ವಿಷಯದಲ್ಲಿ ಅಧಿಕಾರಿಗಳು ಗಂಭೀರವಾಗಿ ಮಧ್ಯಪ್ರವೇಶಿಸದಿರುವುದು ಜನರ ಮೇಲಿನ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ನಾಯಕರು ಆರೋಪಿಸಿದರು.

ಜನರ ಜೀವ ಮತ್ತು ಸಂಚಾರ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ದೇಲಂಪಾಡಿ ಸೇತುವೆಯ ಮರುನಿರ್ಮಾಣ ಕಾರ್ಯವನ್ನು ತಕ್ಷಣ ಆರಂಭಿಸಬೇಕು. ಅದುವರೆಗೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಸಂಚಾರಕ್ಕೆ ಸುರಕ್ಷಿತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಂಬಂಧಿತ ಇಲಾಖೆ ಮತ್ತು ಜನಪ್ರತಿನಿಧಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯಂಗ್ ಡೆಮೋಕ್ರಾಟ್ಸ್ ಜಿಲ್ಲಾ ನಾಯಕರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಯಂಗ್ ಡೆಮೋಕ್ರಾಟ್ಸ್ ಜಿಲ್ಲಾ ಸಂಚಾಲಕ ಕಬೀರ್ ಬ್ಲಾರ್ಕೋಡ್, ಜಿಲ್ಲಾ ಜಂಟಿ ಸಂಚಾಲಕ ಶರೀಫ್ ಪಾವೂರ್, ಜಿಲ್ಲಾ ಸಮಿತಿ ಸದಸ್ಯರಾದ ಸುಹೈಲ್, ತಾಜುದ್ದೀನ್ ಉಪ್ಪಳಗೇಟ್, ರಿಯಾಝ್ ಕುನ್ನಿಲ್ ಹಾಗೂ ಎಸ್‌ಡಿಪಿಐ ಸದಸ್ಯರಾದ ಲತೀಫ್ ಚಿಗುರುಪಾದೆ, ರಝಾಕ್ ಮೀಯಪದವು ಮತ್ತು ಶಾನವಾಝ್ ಮೀಂಜ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!