ಕಾಸರಗೋಡು: ಸನಾತನ ಹಿಂದೂಧರ್ಮ ಉಳಿಯಬೇಕಾದರೆ ಪೌರಾಣಿಕ ಪ್ರಜ್ಞೆ ಜಾಗೃತಗೊಳ್ಳಬೇಕು. ಸಂಸ್ಕೃತಿ ಕಲೆಗಳು ಪ್ರವರ್ಧಮಾನಕ್ಕೆ ಬರಬೇಕು. ಸೂತ್ರದ ಯಕ್ಷಗಾನ ಬೊಂಬೆಯಾಟದ ಮೂಲಕ ಪರಂಪರಾಗತ ಕಲಾಮೌಲ್ಯಕ್ಕೆ ಕಾಯಕಲ್ಪ ನೀಡುತ್ತಿರುವ ಗಡಿನಾಡು ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸತ್ಕಾರ್ಯ ಶ್ಲಾಘನೀಯ ಎಂಬುದಾಗಿ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ವಿನೂತನ ಪರಿಕಲ್ಪನೆಯ ಯೋಜನೆಯನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.


ಶೃಂಗೇರಿ ಶಾರದಾ ಪೀಠದ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಅತ್ಯಾಕರ್ಷಕ ಸೂತ್ರದ ಬೊಂಬೆಗಳನ್ನು ವೀಕ್ಷಿಸಿ ಅವುಗಳ ಬೆಡಗು ಬೆರಗಿಗೆ ಸಂತೋಷ ವ್ಯಕ್ತಪಡಿಸಿ ಹರಸಿದರು. ಶ್ರೀಮಠದ ಗುರುಸದನದಲ್ಲಿ ಪ್ರದರ್ಶಿಸಲ್ಪಟ್ಟ ‘ನರಕಾಸುರ ವಧೆ’ ಪ್ರಸಂಗದ ಬೊಂಬೆಯಾಟವನ್ನು ಸಹಸ್ರಾರು ಆಸ್ತಿಕ ಶ್ರದ್ಧಾಳುಗಳು ವೀಕ್ಷಿಸಿ ಸೂತ್ರಧಾರರನ್ನು ಅಭಿನಂದಿಸಿದರು. ಬೊಂಬೆಯಾಟ ಸಂಘದ ನಿರ್ದೇಶಕ ಕೆ. ವಿ. ರಮೇಶ್ ಮತ್ತು ಸಹಸೂತ್ರಧಾರರನ್ನು ಶ್ರೀ ಶಾರದಾ ಪೀಠದ ವತಿಯಿಂದ ಗೌರವಿಸಲಾಯಿತು. ಸಮಾಜಸೇವಕ, ಕಲಾಪೋಷಕ ಮಂಜುನಾಥ ಮಾನ್ಯ ಸ್ವಾಗತಿಸಿದರು. ಕೆ. ವಿ. ರಮೇಶ್ ಬೊಂಬೆಯಾಟ ನಡೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಪತ್ರಕರ್ತ ಹಾಗೂ ಸಂಘಟಕ ಅಚಲ್ ರಾವ್ ಮರ್ದಂಬೈಲ್ ಉಪಸ್ಥಿತರಿದ್ದರು. ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಬೊಂಬೆಯಾಟ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.
ಪ್ರಧಾನ ಸೂತ್ರಧಾರಿ ಕೆ. ವಿ. ರಮೇಶ್ ಅವರೊಂದಿಗೆ ಸೂತ್ರಧಾರಿಗಳಾದ ಕೆ. ವಿ. ತಿರುಮಲೇಶ್, ಕೆ. ವಿ. ಸುದರ್ಶನ, ಕುಮಾರಸ್ವಾಮಿ, ಅನೀಶ ಪಿಲಿಕುಂಜೆ, ಮನೋರಮ ಎಡನೀರು, ಕಾರ್ತಿಕ್ ಶರ್ಮ ಸಹಕರಿಸಿದರು.


