ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಖಂಡಿನೆ, ಕ್ರಮಕ್ಕೆ ಆಗ್ರಹ- ಮಂಜುಳಾ ನಾಯಕ್

ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಸಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಮುಖಂಡ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಬಳಸಿರುವ ಅವಹೇಳನಕಾರಿ ಹಾಗೂ ಅಸಂವಿಧಾನಿಕ ಭಾಷೆ ಅತ್ಯಂತ ಖಂಡನೀಯ. ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಯೊಬ್ಬರಿಗೆ ಶೋಭೆ ತರುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ನಾಯಕನ ನೀತಿಗಳು, ನಿರ್ಧಾರಗಳು ಅಥವಾ ಹೇಳಿಕೆಗಳನ್ನು ವಾಸ್ತವಾಧಾರಿತವಾಗಿ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ವೈಯಕ್ತಿಕ ನಿಂದನೆ, ಅವಹೇಳನಕಾರಿ ಪದಪ್ರಯೋಗ ಅಥವಾ ಬೆದರಿಕೆಯ ಧಾಟಿಯ ಭಾಷೆಯನ್ನು ಬಳಸುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದುದ್ದಲ್ಲ.

ಹಿಂದೆ ಗಂಭೀರ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸಿದ್ದ ವ್ಯಕ್ತಿಯಾಗಿರುವ ಯಶ್‌ಪಾಲ್ ಸುವರ್ಣ ಅವರು, ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಜವಾಬ್ದಾರಿ ಮತ್ತು ಸಂಯಮವನ್ನು ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ ಅವರ ಇತ್ತೀಚಿನ ಹೇಳಿಕೆಗಳು, ತಮ್ಮ ಹಿಂದಿನ ನಡೆ-ನುಡಿಗಳಿಂದ ಪಾಠ ಕಲಿತಿರುವ ಲಕ್ಷಣವನ್ನು ತೋರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತವೆ. ಶಾಸಕರಂತಹ ಘನತೆಯ ಸ್ಥಾನದಲ್ಲಿರುವವರು ತಮ್ಮ ಹುದ್ದೆಯ ಗೌರವವನ್ನು ಕಾಪಾಡುವ ರೀತಿಯಲ್ಲಿ ನಡೆದುಕೊಳ್ಳಬೇಕು.

ಯಶ್‌ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಭಿನ್ನಾಭಿಪ್ರಾಯಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ವ್ಯಕ್ತಪಡಿಸಬೇಕು; ದ್ವೇಷ, ಅವಹೇಳನ ಮತ್ತು ಬೆದರಿಕೆಯ ರಾಜಕಾರಣಕ್ಕೆ ಯಾವುದೇ ಸ್ಥಾನ ಇರಬಾರದು.

ಸಾರ್ವಜನಿಕ ಬದುಕಿನಲ್ಲಿ ಇರುವ ಪ್ರತಿಯೊಬ್ಬ ಜನಪ್ರತಿನಿಧಿಯೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ರಾಜಕೀಯ ಸಂಸ್ಕೃತಿಗೆ ಗೌರವ ತರುವ ರೀತಿಯಲ್ಲಿ ವರ್ತಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಕರ್ನಾಟಕ ರಾಜ್ಯ ಸರಕಾರ, ಪೊಲೀಸ್ ಇಲಾಖೆ ಈ ಕೂಡಲೇ ಶಾಸಕ ಯಶ್ಪಾಲ್ ಸುವರ್ಣಯ ಮೇಲಿನ ಪ್ರಕರಣನವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೂ ಸೂಕ್ತ ಕಟ್ಟುನಿಟ್ಟಿನ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ದೇಶದ ಸಂವಿಧಾನದ ಆಶಯಗಳಿಗೆ, ನೆಲದ ಕಾನೂನಿಗೆ ಬೆಲೆ ಕೊಡದೆ, ಸಾಮಾಜಿಕ ಸೌಹಾರ್ದತೆಯನ್ನು ಹಾಳುಗೆಡಹುವ ಇಂತಹ ಶಾಸಕರನ್ನು ಆ ಸ್ಥಾನದಿಂದಲೇ ಅನರ್ಹಗೊಳಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೇಸ್ ಮುಖಂಡರಾದ ಮಂಜುಳಾ ನಾಯಕ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ‌.

SHARE
Loading spinner

Leave a Reply

Your email address will not be published. Required fields are marked *

error: Content is protected !!