ಮಂಗಳೂರು, ಜು. 31: ಕರಾವಳಿ ಭಾಗದಲ್ಲಿ ಬೊಜ್ಜು (ಅತಿಯಾದ ತೂಕ) ಹಾಗೂ ಮೆಟಬಾಲಿಕ್ ಅಸ್ವಸ್ಥತೆಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರಿನ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ‘ಸಮಗ್ರ ಬೊಜ್ಜು ಮತ್ತು ಮೆಟಬಾಲಿಕ್ ಕ್ಲಿನಿಕ್’ ಅನ್ನು ಆಗಸ್ಟ್ 1ರಿಂದ ಆರಂಭಿಸಲಾಗುತ್ತಿದೆ ಎಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಂಗಳೂರಿನ ಡೀನ್ ಡಾ. ಉನ್ನಿಕೃಷ್ಣನ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ನಿಖರ ರೋಗನಿರ್ಣಯ ಹಾಗೂ ಸಮಗ್ರ ಚಿಕಿತ್ಸೆಗೆ ಅಗತ್ಯವಿರುವ ವಿವಿಧ ವೈದ್ಯಕೀಯ ವಿಭಾಗಗಳ ಪರಿಣಿತರನ್ನು ಒಂದೇ ಸೂರಿನಡಿ ತರಲು ಈ ಕ್ಲಿನಿಕ್ ನೆರವಾಗಲಿದೆ ಎಂದು ಹೇಳಿದರು.

ಈ ಕ್ಲಿನಿಕ್ನ ಆರಂಭವು ಕೆಎಂಸಿ ಮಂಗಳೂರು ಹೊಂದಿರುವ ಶೈಕ್ಷಣಿಕ ಹಾಗೂ ವೈದ್ಯಕೀಯ ಸಾಮರ್ಥ್ಯದ ಪ್ರತೀಕವಾಗಿದೆ. ಬೊಜ್ಜು ಮತ್ತು ಮೆಟಬಾಲಿಕ್ ಅಸ್ವಸ್ಥತೆಗಳ ಚಿಕಿತ್ಸೆಗೆ ಬಹು-ವಿಭಾಗೀಯ ಸಂಯೋಜಿತ ಸೇವೆ ಅಗತ್ಯವಾಗಿದ್ದು, ಬೋಧನಾ ಆಸ್ಪತ್ರೆಗಳ ಮೂಲಕ ಅದನ್ನು ಪರಿಣಾಮಕಾರಿಯಾಗಿ ಒದಗಿಸಲು ಸಾಧ್ಯವಾಗುತ್ತದೆ. ಇಂತಹ ಉಪಕ್ರಮಗಳು ವೈಜ್ಞಾನಿಕ ಆಧಾರಿತ ಹಾಗೂ ಕಾಳಜಿಯುತ ಆರೋಗ್ಯ ಸೇವೆ ಒದಗಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಅವರು ತಿಳಿಸಿದರು.
ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ ಮಾತನಾಡಿ, ಬೊಜ್ಜು ಎಂಬುದು ಕೇವಲ ದೇಹದ ತೂಕ ಹೆಚ್ಚಳವಲ್ಲ; ಅದು ದೀರ್ಘಕಾಲದ ವೈಜ್ಞಾನಿಕ ನಿರ್ವಹಣೆ ಅಗತ್ಯವಿರುವ ಸಂಕೀರ್ಣ ವೈದ್ಯಕೀಯ ಸ್ಥಿತಿಯಾಗಿದೆ ಎಂದು ಹೇಳಿದರು.
ಆರಂಭಿಕ ಹಂತದಲ್ಲೇ ತಪಾಸಣೆ ನಡೆಸಿ, ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದೊಂದಿಗೆ ಚಿಕಿತ್ಸೆ ನೀಡಿದರೆ ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಗಣನೀಯವಾಗಿ ತಗ್ಗಿಸಬಹುದು. ಇದರಿಂದ ರೋಗಿಗಳ ಒಟ್ಟಾರೆ ಆರೋಗ್ಯ ಹಾಗೂ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಸಚಿನ್ ಕೃಷ್ಣ ರಾಜ್ ಹಾಗೂ ಗಣೇಶ್ ಹೆಗ್ಡೆ ಉಪಸ್ಥಿತರಿದ್ದರು.


