ಹಕ್ಕುಪತ್ರಕ್ಕಾಗಿ ಅಹೋರಾತ್ರಿ ಮೌನ ಪ್ರತಿಭಟನೆ ಆರಂಭ

ಬಂಟ್ವಾಳ, ಮೇ 18: ಪುಣಚ ಗ್ರಾಮದ 3 ನೇ ವಾರ್ಡ್ ನ ದೇವಿನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಳೆದ ಹಲವು ವರ್ಷದಿಂದ ವಾಸದ ಮನೆಗೆ ಹಕ್ಕುಪತ್ರ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ಮೂರು ಮನೆಯ ಸದಸ್ಯರು ಹಾಗೂ ಸಂಬಂಧಿಕರು ಬಂಟ್ವಾಳ ತಾಲೂಕು ಕಚೇರಿ ಎದುರುಗಡೆ ಸೋಮವಾರ ಬೆಳಗ್ಗಿನಿಂದ ಅಹೋರಾತ್ರಿ ಮೌನ ಪ್ರತಿಭಟನೆ ಆರಂಭಿಸಿದ್ದಾರೆ. ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದ್ದ ಬೇಬು ಕುಮಾರಿ, ವಿಜಯಲಕ್ಷ್ಮಿ, ಪ್ರೇಮ ಅವರು ಹಾಗೂ ಮನೆ ಮಂದಿ ಸೇರಿ ಸುಮಾರು 15 ಮಂದಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಸುದ್ದಿಗಾರರ ಜತೆಗೆ ಮಾತನಾಡಿದ ಪ್ರತಿಭಟನೆ ನೇತೃತ್ವ ವಹಿಸಿದ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ಅವರು ಪುಣಚ ಗ್ರಾಮದ ದೇವಿನಗರ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ 13 ವಾಸದ ಮನೆಗಳಿದ್ದು, ಈ ಪೈಕಿ 5 ಮನೆಯವರಿಗೆ ಮನೆ ಕಟ್ಟಿ 8 ವರ್ಷವಾದರೂ ಈವರೆಗೆ ಹಕ್ಕು ಪತ್ರ ದೊರೆತಿರುವುದಿಲ್ಲ. ಈ ಬಗ್ಗೆ ಶಾಸಕರು, ವಿವಿಧ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಅನುಕೂಲ ಆಗಲಿಲ್ಲ. ಯಾವುದೋ ಒತ್ತಡದಿಂದ ಬಡವರ ಮನೆಗೆ ಇಂದು ರಕ್ಷಣೆ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಸದ ಮನೆಗೆ ಹಕ್ಕುಪತ್ರ ನೀಡುವಂತೆ ಕೋರಿ ಮನವಿ ಸಲ್ಲಿಸಿದಾಗ ಅದಕ್ಕೆ ಸಹಕಾರ ನೀಡದ ಇಂದಿನ ಆಡಳಿತ ವ್ಯವಸ್ಥೆಯ ವಿರುದ್ದ ನೋವು ಅನುಭವಿಸಿ ಮನೆ ಮಂದಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಅಹೋರಾತ್ರಿ ಪ್ರತಿಭಟನೆ ಮುಂದುವರಿಯಲಿದೆ ಎಂದರು.
ಸೋಮವಾರ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿದು ನಾವು ತಹಶೀಲ್ದಾರ್ ಕಚೇರಿಗೆ ಬಂದಿದ್ದೆವು. ಆದರೆ ಹಕ್ಕುಪತ್ರ ಸಿಗಲಿಲ್ಲ. ಈ ಕಾರಣದಿಂದ ಇನ್ನು ಕಾಯುವ ಬದಲು ಅಹೋರಾತ್ರಿ ಮೌನಪ್ರತಿಭಟನೆಯನ್ನು ಬಂಟ್ವಾಳ ತಾಲೂಕು ಕಚೇರಿ ಎದುರುಗಡೆಯಲ್ಲಿ ನಡೆಸಲು ತೀರ್ಮಾನಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!