ತೆಪ್ಪವೇ ಆಸರೆ..! ಕಡಬದಲ್ಲಿ ಸೇತುವೆ ಇಲ್ಲದೆ ಗ್ರಾಮಸ್ಥರ ಪರದಾಟ

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಹರಿಯುವ ಹೊಳೆ ದಾಟಲು ಮಳೆಗಾಲದಲ್ಲಿ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದು, ಇವರ ಸಂಕಷ್ಟವನ್ನು ಆಲಿಸಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ರಾಮಕುಂಜ ಅವರು ಆ.2ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೇತುವೆ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಕಲ್ಲುಗುಡ್ಡೆಯಿಂದ ಇಚ್ಲಂಪಾಡಿ ಸಂಪರ್ಕಿಸುವ ರಸ್ತೆಯ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಹೊಳೆಯೊಂದು ಹರಿಯುತ್ತಿದ್ದು ಬೇಸಿಗೆ ಕಾಲದಲ್ಲಿ ಗ್ರಾಮಸ್ಥರೇ ಪಾಲ ರಚಿಸಿಕೊಂಡು ಹೊಳೆ ದಾಟುತ್ತಿದ್ದಾರೆ.

ಆದರೆ ಮಳೆಗಾಲದಲ್ಲಿ ಗುಂಡ್ಯ ಹೊಳೆಯಲ್ಲಿ ಪ್ರವಾಹ ಬಂದಲ್ಲಿ ಸುತ್ತಲೂ ನೀರು ಆವರಿಸಿ ಈ ಪಾಲ ಮುಳುಗಡೆಯಾಗುತ್ತದೆ. ಆಗ ಗ್ರಾಮಸ್ಥರು ಹೊಳೆ ದಾಟಲು ಪರದಾಟ ನಡೆಸಬೇಕಾಗುತ್ತದೆ. ಈ ವೇಳೆ ಹೊಳೆ ದಾಟಲು ಅವರಿಗೆ ತೆಪ್ಪವೇ ಆಸರೆಯಾಗಬೇಕಿದೆ. ಈ ಭಾಗದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಮನೆಗಳಿದ್ದು ದಿನ ನಿತ್ಯ ಶಾಲಾ ಮಕ್ಕಳು, ಗ್ರಾಮಸ್ಥರು ಈ ಹೊಳೆ ದಾಟಿಯೇ ತಮ್ಮ ಕೆಲಸಗಳಿಗೆ ಹೋಗಬೇಕಾಗಿದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಈ ಭಾಗದ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸೇತುವೆ ನಿರ್ಮಾಣದ ಭರವಸೆ ಸಿಕ್ಕಿದೆಯೇ ಹೊರತು ಈ ತನಕವೂ ಸೇತುವೆ ಭಾಗ್ಯ ಇಲ್ಲಿನ ಗ್ರಾಮಸ್ಥರಿಗೆ ಸಿಗದೇ ಇರುವುದು ಗ್ರಾಮಸ್ಥರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.

ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಭೇಟಿ;
ಮಳೆಗಾಲದಲ್ಲಿ ಹೊಳೆದಾಟಲು ಪರದಾಟ ನಡೆಸಬೇಕಾದ ಇಲ್ಲಿನ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರು ಕಾಂಗ್ರೆಸ್ ಮುಖಂಡ ಕರುಣಾಕರ ಗೌಡ ದೊಡ್ಡಉರ್ಕ ಅವರ ಗಮನಕ್ಕೆ ತಂದಿದ್ದರು. ಅವರು ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ರಾಮಕುಂಜ ಅವರಿಗೆ ಮನವಿ ಮಾಡಿದ್ದರು. ಆ.೨ರಂದು ಬೆಳಗ್ಗೆ ಜಿ.ಕೃಷ್ಣಪ್ಪ ಹಾಗೂ ಕರುಣಾಕರ ಗೌಡ ದೊಡ್ಡ ಉರ್ಕ ಅವರು ಬಾಲೆಮಾರು ಕುರ್ನೂಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೊಂದಿಗೆ ಸಮಸ್ಯೆ ಆಲಿಸಿದ ಜಿ.ಕೃಷ್ಣಪ್ಪ ಅವರು, ಇಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಸ್ಥಳದಿಂದಲೇ ದೂರವಾಣಿ ಮೂಲಕ ಪಿಡಬ್ಲ್ಯುಡಿ ಇಂಜಿನಿಯರ್ ಅವರನ್ನು ಸಂಪರ್ಕಿಸಿ ಸೇತುವೆಗೆ ಅಂದಾಜುಪಟ್ಟಿ ತಯಾರಿಸುವಂತೆಯೂ ಸೂಚನೆ ನೀಡಿದ್ದಾರೆ.

ಈ ವೇಳೆ ಗ್ರಾಮಸ್ಥರಾದ ಶೀನಪ್ಪ ಗೌಡ ಕುರ್ನೂಜಿ, ಶೇಖರ ಗೌಡ ಬಾಲೆಮಾರು, ಧನಂಜಯ ಗೌಡ ಬಳ್ಳೇರಿ, ಪ್ರಮೋದ್ ಗೌಡ ಬಳ್ಳೇರಿ, ಚಂದ್ರಶೇಖರ ಗೌಡ ಬಳ್ಳೇರಿ, ಚೇತನ್ ಬಳ್ಳೇರಿ, ಬಾಲಕೃಷ್ಣ ಬಳ್ಳೇರಿ, ಬಾಲಕ್ಕ ಕುರ್ನೂಜಿ, ನಳಿನಿ ಕುರ್ನೂಜಿ, ರಾಮಕ್ಕ ಬಾಲೆಮಾರು, ದೇಜಪ್ಪ ಗೌಡ ಬಾಲೆಮಾರು ಮತ್ತಿತರರು ಉಪಸ್ಥಿತರಿದ್ದರು.

ಹೊಳೆದಾಟಲು ತೆಪ್ಪವೇ ಆಸರೆ..!
ಬಾಲೆಮಾರು ಕುರ್ನೂಜಿಯಲ್ಲಿ ಗ್ರಾಮಸ್ಥರೇ ರಚಿಸಿಕೊಂಡ ಪಾಲ ಮುಳುಗಡೆಯಾದಲ್ಲಿ ಹೊಳೆ ದಾಟಲು ಗ್ರಾಮಸ್ಥರಿಗೆ ತೆಪ್ಪವೇ ಆಸರೆಯಾಗುತ್ತಿದೆ. ಗುಂಡ್ಯ ಹೊಳೆ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಬಾಲೆಮಾರು ಕುರ್ನೂಜಿಯಲ್ಲಿ ಹರಿಯುವ ಹೊಳೆಯೂ ಉಕ್ಕಿ ಹರಿದು ಸುತ್ತಲೂ ನೀರು ಆವರಿಸುತ್ತದೆ. ಇದರಿಂದ ಗ್ರಾಮಸ್ಥರು ಹೊಳೆದಾಟಲು ನಿರ್ಮಿಸಿದ ಪಾಲವೂ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರು ತೆಪ್ಪ ಬಳಸಿಕೊಂಡು ಹೊಳೆದಾಟಿ ಹೋಗುತ್ತಿದ್ದಾರೆ. ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!