ದೇವಾಲಯಗಳ ಸರ್ಕಾರಿ ನಿಯಂತ್ರಣ ಮುಕ್ತಿಗೆ ದೇಶವ್ಯಾಪಿ ಹೋರಾಟ: ವಿಹೆಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್

ಮಂಗಳೂರು, ಆ.6:* ದೇಶದಾದ್ಯಂತ ಹಿಂದೂ ದೇವಾಲಯಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಹೋರಾಟ ಆರಂಭಿಸಲಿದೆ ಎಂದು ವಿಹೆಚ್‌ಪಿಯ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.

ನಗರದ ವಿಹೆಚ್‌ಪಿ ಕಾರ್ಯಾಲಯ ‘ವಿಶ್ವಶ್ರೀ’ಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ಮಠಗಳು, ಆಶ್ರಮಗಳು ಹಾಗೂ ಸಂತ-ಮಹಾತ್ಮರ ಮಾರ್ಗದರ್ಶನದೊಂದಿಗೆ ಈ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಕರ್ನಾಟಕ ಪ್ರವಾಸದ ಅಂಗವಾಗಿ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಂಗಳೂರಿಗೆ ಆಗಮಿಸಿರುವುದಾಗಿ ತಿಳಿಸಿದರು.

ಈ ವರ್ಷ ವಿಹೆಚ್‌ಪಿಯ ಹಿರಿಯ ನಾಯಕ ದಿವಂಗತ ಅಶೋಕ್ ಸಿಂಘಲ್ ಅವರ ಜನ್ಮಶತಮಾನೋತ್ಸವ ವರ್ಷವಾಗಿದ್ದು, ಸೆಪ್ಟೆಂಬರ್ 27ರಿಂದ ಒಂದು ವರ್ಷ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ರಾಮಜನ್ಮಭೂಮಿ ಹೋರಾಟ, ಗೋ ಸಂರಕ್ಷಣೆ, ವೇದ ಸಂರಕ್ಷಣೆ, ಕುಟುಂಬ ಪ್ರಬೋಧನ ಹಾಗೂ ಸಾಮಾಜಿಕ ಸಮರಸತೆಗಾಗಿ ಅಶೋಕ್ ಸಿಂಘಲ್ ನೀಡಿದ ಕೊಡುಗೆಯನ್ನು ಸ್ಮರಿಸುವುದರೊಂದಿಗೆ ಅವರು ಆರಂಭಿಸಿದ ಕಾರ್ಯಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.

ಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕ ಸರ್ಕಾರಕ್ಕೆ ಅತ್ಯಧಿಕ ಆದಾಯ ತರುವ ದೇವಾಲಯಗಳಲ್ಲಿ ಒಂದಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ದೇವಾಲಯಗಳ ಆದಾಯವನ್ನು ಸರ್ಕಾರ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ದೇವಾಲಯಗಳ ಆಡಳಿತವನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸಿದರೆ ಸಾವಿರಾರು ಕೋಟಿ ರೂಪಾಯಿ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಮಸೀದಿ, ಚರ್ಚ್, ಗುರುದ್ವಾರ ಅಥವಾ ಜೈನ-ಬೌದ್ಧ ಧಾರ್ಮಿಕ ಸಂಸ್ಥೆಗಳ ಆಡಳಿತ ನಡೆಸುವುದಿಲ್ಲ. ಹಾಗಿದ್ದರೆ ದೇವಾಲಯಗಳ ಆಡಳಿತವನ್ನು ಮಾತ್ರ ಸರ್ಕಾರ ನಡೆಸುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ದೇವಾಲಯಗಳ ಆದಾಯವನ್ನು ಸರ್ಕಾರದ ಖಜಾನೆಗೆ ವರ್ಗಾಯಿಸುವುದು, ಆಡಿಟ್ ಶುಲ್ಕ ಸೇರಿದಂತೆ ವಿವಿಧ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಹಾಗೂ ಅಧಿಕಾರಿಗಳ ವೇತನವನ್ನು ದೇವಾಲಯದ ನಿಧಿಯಿಂದಲೇ ಭರಿಸುವುದು ಸಮಂಜಸವಲ್ಲ ಎಂದು ಟೀಕಿಸಿದರು.

ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಪ್ರಮುಖ ಚರ್ಚೆಯ ವಿಷಯವನ್ನಾಗಿ ಮಾಡಲಾಗುವುದು. ಅಗತ್ಯವಿದ್ದರೆ ಬೃಹತ್ ಜನಾಂದೋಲನ ನಡೆಸಲಾಗುವುದು. ರಾಮಜನ್ಮಭೂಮಿ, ರಾಮಸೇತು, ಗೋ ಸಂರಕ್ಷಣೆ ಹಾಗೂ ಏಕರೂಪ ನಾಗರಿಕ ಸಂಹಿತೆ ಕುರಿತ ಹೋರಾಟಗಳಲ್ಲಿ ಯಶಸ್ಸು ಸಾಧಿಸಿದಂತೆ ಈ ಹೋರಾಟದಲ್ಲಿಯೂ ಯಶಸ್ಸು ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಮಮಂದಿರ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು

ಅಯೋಧ್ಯೆಯ ಶ್ರೀರಾಮ ಮಂದಿರದ ಆಡಳಿತ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ದೇವಾಲಯ ನಿರ್ವಹಣೆಯಲ್ಲಿ ಅನುಭವ ಹೊಂದಿದ ಪರಿಣಿತರನ್ನು ನೇಮಿಸಬೇಕು ಎಂದು ಹೇಳಿದರು. ಆಡಳಿತದಲ್ಲಿ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಜಾರಿಗೊಳಿಸುವ ಜೊತೆಗೆ ಆಧುನಿಕ ತಂತ್ರಜ್ಞಾನ, ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆ ಹಾಗೂ ಸಮರ್ಥ ನಿರ್ವಹಣಾ ಕ್ರಮಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ದೇವಾಲಯಕ್ಕೆ ಬರುವ ಪ್ರತಿಯೊಂದು ರೂಪಾಯಿ ಎಲ್ಲಿಂದ ಬಂದಿದೆ, ಯಾವ ಉದ್ದೇಶಕ್ಕೆ ವೆಚ್ಚವಾಗುತ್ತಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಲಭ್ಯವಾಗಬೇಕು. ಹಿಂದಿನ ಅವ್ಯವಹಾರಗಳಿಗೆ ಕಾರಣರಾದವರಿಂದ ಹಣ ವಸೂಲಿ ಮಾಡಿ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ದುರುಪಯೋಗ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಮಮಂದಿರ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ

ಅಯೋಧ್ಯೆಯ ಶ್ರೀರಾಮ ಮಂದಿರದ ಆಡಳಿತಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ವೇ ಅಧಿಕಾರಿಗಳನ್ನು ನೇಮಿಸಲಿದೆ. ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 5,000ಕ್ಕೂ ಅಧಿಕ ಅರ್ಜಿಗಳು ಬಂದಿರುವುದರಿಂದ ಆಯ್ಕೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗಲಿದೆ ಎಂದು ತಿಳಿಸಿದರು.

ಅಯೋಧ್ಯೆ ಶ್ರೀರಾಮ ಮಂದಿರದ ಆಡಳಿತದಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ. ಹಿಂದೂ ಸಮಾಜವೇ ತನ್ನ ದೇವಾಲಯವನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ. ಎಂ.ಬಿ. ಪುರಾಣಿಕ್, ಶರಣ್ ಪಂಪ್‌ವೆಲ್, ಪುರುಷೋತ್ತಮ ಹಾಗೂ ಭುಜಂಗ ಕುಮಾರ್** ಸೇರಿದಂತೆ ವಿಹೆಚ್‌ಪಿಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!