ಮಂಜೇಶ್ವರ: ಚೇವಾರ್ ನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಹಾವೊಂದು ನೇರವಾಗಿ ಚಾಲಕನ ಮೈಮೇಲೆ ಏರಿದೆ.
ಪೈವಳಿಕೆ ಚೇವಾರಿನ ಆಟೋ ಚಾಲಕ ಪಿಯುಸ್ ಡಿ’ಸೋಜಾ ಅವರು ಇಬ್ಬರು ಪ್ರಯಾಣಿಕರೊಂದಿಗೆ ಸುಬ್ಬಯ್ಯಕಟ್ಟೆಗೆ ತೆರಳುತ್ತಿದ್ದಾಗ ಈ ಅಚ್ಚರಿಯ ಘಟನೆ ಸಂಭವಿಸಿದೆ.

ಪ್ರಯಾಣದ ಮಧ್ಯೆ ಕೈಗೆ ಏನೋ ತಾಕಿದ ಅನುಭವವಾಗಿ ಚಾಲಕ ಗಮನಿಸಿದಾಗ, ಅತಿ ವಿಷಕಾರಿಯಲ್ಲದ ಹಾವೊಂದು ಅವರ ಕೈಯನ್ನು ಸುತ್ತಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಎಚ್ಚೆತ್ತ ಪಿಯುಸ್ ಕೈ ಕೊಡವಿ ಹಾವನ್ನು ಕೆಳಗೆ ತಳ್ಳಿದ್ದಾರೆ.

ತಕ್ಷಣವೇ ಚಾಲಕ ಹಾಗೂ ಪ್ರಯಾಣಿಕರು ಆಟೋದಿಂದ ಕೆಳಗಿಳಿದಿದ್ದು, ಅಷ್ಟರಲ್ಲಿ ಹಾವು ರಿಕ್ಷಾದ ಹ್ಯಾಂಡಲ್‌ನ ಒಳಭಾಗಕ್ಕೆ ಸೇರಿಕೊಂಡಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯ ಉಬೈದ್, ಹಾವನ್ನು ಅತ್ಯಂತ ಜಾಣ್ಮೆಯಿಂದ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದು, ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.


