ಕಾಸರಗೋಡು:ಕನ್ನಡ ಭವನ ಪ್ರಕಾಶನದ ಮೂಲಕ ಮತ್ತೊಂದು ಮಹತ್ವದ ಕೃತಿ ಓದುಗರ ಕೈ ಸೇರಲು ಸಿದ್ಧವಾಗಿದ್ದು, ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳಾದೇವಿ, ಮಂಗಳೂರು ಅವರ ಏಳನೇ ಕೃತಿ ‘ಸಪ್ತಯಾನ’ ಪ್ರವಾಸ ಕಥನ ಇದೀಗ ಮುದ್ರಣ ಹಂತದಲ್ಲಿದೆ. ಶೀಘ್ರದಲ್ಲೇ ಕೃತಿ ಲೋಕಾರ್ಪಣೆಗೆ ಸಿದ್ಧತೆ ನಡೆಯುತ್ತಿದೆ.


ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂದ್ಯಾ ರಾಣಿ ಟೀಚರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದು, ಪ್ರಕಾಶಕರಾಗಿ ಕನ್ನಡ ಭವನ ಪ್ರಕಾಶನದ ವತಿಯಿಂದ ಕೃತಿ ಪ್ರಕಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಲೇಖಕಿಯ ಮೊದಲ ಪ್ರವಾಸ ಕಥನ ‘ಶರದಿಯಾಚೆ ಪ್ರಥಮ ಹೆಜ್ಜೆ’ ಕೃತಿಗೆ ಓದುಗರಿಂದ ಉತ್ತಮ ಸ್ಪಂದನೆ ದೊರೆತು, ಭಾರೀ ಬೇಡಿಕೆ ವ್ಯಕ್ತವಾಗಿತ್ತು. ಇದೀಗ ಆ ಕೃತಿಯನ್ನೂ ಕನ್ನಡ ಭವನ ಪ್ರಕಾಶನದ ವತಿಯಿಂದ ಮರುಮುದ್ರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
‘ಸಪ್ತಯಾನ’ ಕೃತಿಗೆ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರು ಮುನ್ನುಡಿ ಬರೆದಿದ್ದಾರೆ. ಜಿಲ್ಲಾ ಅರಣ್ಯಾಧಿಕಾರಿ ಶ್ರೀಧರ್ ಬೈಂದೂರು ಅವರು ಬೆನ್ನುಡಿ, ಶಿಕ್ಷಣ ತಜ್ಞ ಹಾಗೂ ಲೇಖಕ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರು ಚೆನ್ನುಡಿ, ಡಾ. ರವೀಂದ್ರ ಜೆಪ್ಪು ಅವರು ನಲ್ನುಡಿ ಬರೆದಿದ್ದಾರೆ.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡೋರಿನ್ ತಾವರೋ ಅವರು ಶುಭನುಡಿ ಬರೆದಿದ್ದು, ಕುಮಾರಿ ಶ್ರಿಯ ಎಸ್. ರಾವ್ ಅವರ ಮುಖಪುಟ ವಿನ್ಯಾಸ ಕೃತಿಗೆ ಮತ್ತಷ್ಟು ಮೆರುಗು ನೀಡಿದೆ.
ಪ್ರವಾಸದ ಅನುಭವಗಳು, ವೈವಿಧ್ಯಮಯ ಸ್ಥಳಗಳ ಪರಿಚಯ ಹಾಗೂ ಲೇಖಕಿಯ ಅನುಭವ ಕಥನಗಳನ್ನು ಒಳಗೊಂಡಿರುವ ‘ಸಪ್ತಯಾನ’ ಕೃತಿ ಶೀಘ್ರದಲ್ಲೇ ಓದುಗರ ಕೈ ಸೇರಲಿದೆ.

