ಆ.10ರಂದು ಎಂ. ದೇವದಾಸ್ ಅವರಿಗೆ ‘ನುಡಿ ನಮನ’ ಕಾರ್ಯಕ್ರಮ; ಡಿಸಿ ಮನ್ನ ಭೂ ಹೋರಾಟ ಮುಂದುವರಿಕೆ ಘೋಷಣೆ

ಮಂಗಳೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಪ್ರೊ. ಬಿ. ಕೃಷ್ಣಪ್ಪ ಬಣ) ರಾಜ್ಯ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಹೋರಾಟಗಾರ ಎಂ. ದೇವದಾಸ್ ಅವರಿಗೆ ಗೌರವ ನುಡಿ ನಮನ ಕಾರ್ಯಕ್ರಮವನ್ನು ಆಗಸ್ಟ್‌ 10ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಉರ್ವಸ್ಟೋರ್‌ನ ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ರಾಜ್ಯ ಸಂಚಾಲಕ ಎಂ. ಸೋಮಶೇಖರ್ (ಹಾಸನ) ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಮಾತನಾಡಿ, ಶೋಷಿತ ವರ್ಗಗಳಿಗೆ ಭೂಮಿ ದೊರಕಿಸಿಕೊಡುವ ಉದ್ದೇಶದಿಂದ ಎಂ. ದೇವದಾಸ್ ಅವರು 2010ರಿಂದ ‘ಡಿಸಿ ಮನ್ನ’ ಭೂ ಹೋರಾಟವನ್ನು ಮುನ್ನಡೆಸುತ್ತಿದ್ದರು. ಅವರು ಅಗಲಿದ್ದರೂ ಅವರ ಕನಸನ್ನು ಸಾಕಾರಗೊಳಿಸುವ ಹೊಣೆಗಾರಿಕೆಯನ್ನು ಸಂಘಟನೆ ವಹಿಸಿಕೊಳ್ಳಲಿದೆ ಎಂದರು.

ರಾಜ್ಯದ ಎಲ್ಲಾ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಡಿಸಿ ಮನ್ನ ಭೂ ಸಮಸ್ಯೆ ಇತ್ಯರ್ಥಕ್ಕೆ ಗಡುವು ನಿಗದಿಪಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ನಿಗದಿತ ಅವಧಿಯೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ, ಎಂ. ದೇವದಾಸ್ ಅವರ ಹೆಸರಿನಲ್ಲಿ ರಾಜ್ಯವ್ಯಾಪಿ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಬಳಿಕ ರಾಜ್ಯ ನಾಯಕರು ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೋರಾಟದ ಮುಂದಿನ ರೂಪುರೇಷೆಗಳನ್ನು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜಯ್ಯ ಕೃಷ್ಣಾನಂದ, ಸರೋಜಿನಿ ಬಂಟ್ವಾಳ, ರಾಘವೇಂದ್ರ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!