ಕಾಸರಗೋಡು: ರಸ್ತೆ ಬದಿ ಬಿದ್ದಿದ್ದ ದೊಡ್ಡ ಮೊತ್ತದ ಹಣ ಹಾಗೂ ಅಮೂಲ್ಯ ದಾಖಲೆಗಳಿದ್ದ ಪರ್ಸ್ ಅನ್ನು ಕುಂಬಳ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಮೊಗ್ರಾಲ್ ಸರಕಾರಿ ವೊಕೇಷನಲ್ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ.

ಮೊಗ್ರಾಲ್ ಸರಕಾರಿ. ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ಸರ್ಫಾಸ್, ಅಕ್ಷರ್, ಅಫೀಸ್, ಇರ್ಫಾನ್ ಹಾಗೂ ಮಿದ್ಲಾಜ್ ಮಾದರಿ ಕಾರ್ಯ ಮೆರೆದ ವಿದ್ಯಾರ್ಥಿಗಳು.
ಗುರುವಾರ ಸಂಜೆ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆರಿಕ್ಕಾಡಿಯ ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿ ವಿದ್ಯಾರ್ಥಿಗಳಿಗೆ ಈ ಪರ್ಸ್ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ ಒಳಗಡೆ ದೊಡ್ಡ ಮೊತ್ತದ ಹಣ ಮತ್ತು ಅಗತ್ಯ ದಾಖಲೆಗಳು ಕಂಡುಬಂದವು.

ಕೂಡಲೇ ಯಾವುದೇ ದುರ್ವಿಚಾರಕ್ಕೆ ಅವಕಾಶ ನೀಡದೆ, ಸಿಕ್ಕಿದ ಪರ್ಸ್ ಅನ್ನು ತೆಗೆದುಕೊಂಡು ನೇರವಾಗಿ ಕುಂಬಳ ಪೊಲೀಸ್ ಠಾಣೆಗೆ ತೆರಳಿದ ವಿದ್ಯಾರ್ಥಿಗಳು, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅದನ್ನು ಒಪ್ಪಿಸಿದ್ದಾರೆ.
ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು ನಡೆಸಿದ ತರಾತುರಿಯ ತನಿಖೆಯಲ್ಲಿ ಪರ್ಸ್‌ನ ನಿಜವಾದ ಮಾಲೀಕರು ಮೊಗ್ರಾರ್ ಪುತ್ತೂರಿನ ನಬೀಸಾ ಎಂಬುದು ತಿಳಿದುಬಂದಿತು. ತಕ್ಷಣ ಅವರೊಂದಿಗೆ ಸಂಪರ್ಕ ಸಾಧಿಸಿ ಠಾಣೆಗೆ ಕರೆಸಿಕೊಂಡ ಪೊಲೀಸರು, ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಒಡತಿ ನಬೀಸಾ ಅವರಿಗೆ ಪರ್ಸ್ ಅನ್ನು ಹಸ್ತಾಂತರಿಸಿದ್ದಾರೆ.

ಬಡತನದಲ್ಲೂ ವಿದ್ಯಾರ್ಥಿಗಳು ತೋರಿದ ಈ ಪ್ರಾಮಾಣಿಕತೆ ಮತ್ತು ಸತ್ಪ್ರವರ್ತನೆಯನ್ನು ಕುಂಬಳೆ ಪೊಲೀಸರು, ಶಾಲೆಯ ಪಿ.ಟಿ.ಎ. ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಕೊಂಡಾಡಿ ಅಭಿನಂದಿಸಿದ್ದಾರೆ.

