ಮಂಗಳೂರು: ರಾಜ್ಯದಲ್ಲಿ ಯುವಶಕ್ತಿಯನ್ನು ಸಂಘಟಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೌಹಾರ್ದತೆ, ನಾಯಕತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಆರಂಭಿಸಿರುವ ‘ಭಾರತ್ ಜೋಡೊ ಸಂಘಗಳ’ ಸ್ಥಾಪನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ಯುವಜನರ ಸಬಲೀಕರಣಕ್ಕೆ ಮಹತ್ವ ನೀಡಿದ್ದು, ಕಲೆ, ಸಂಸ್ಕೃತಿ, ಕ್ರೀಡೆ, ಕೌಶಲ್ಯಾಭಿವೃದ್ಧಿ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಉದ್ದೇಶದಿಂದ ಭಾರತ್ ಜೋಡೊ ಸಂಘಗಳ ಸ್ಥಾಪನೆಗೆ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಶ್ರಮಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರನ್ನು ಯುವ ಸಮುದಾಯದ ಪರವಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಭಿನಂದಿಸುತ್ತದೆ ಎಂದಿದ್ದಾರೆ.

ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿಯೂ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್‌ಗೆ ‘ರಾಜೀವ್ ಗಾಂಧಿ ಯುವಶಕ್ತಿ’ ಯೋಜನೆಯಡಿ ಯುವಜನರ ಚಟುವಟಿಕೆಗಳಿಗೆ ತಲಾ ₹10 ಸಾವಿರ ಅನುದಾನ ಘೋಷಿಸಿ, ಗ್ರಾಮೀಣ ಯುವಶಕ್ತಿಗೆ ಹೊಸ ಚೈತನ್ಯ ತುಂಬಿದ್ದರು. ಆ ಯೋಜನೆ ರಾಜ್ಯದಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಯುವಜನರನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ಅವರು ಸ್ಮರಿಸಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಯುವಜನತೆ ಸಕಾರಾತ್ಮಕ ದಾರಿಯಲ್ಲಿ ಸಾಗುವ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ್ ಜೋಡೊ ಸಂಘಗಳ ಸ್ಥಾಪನೆಯು ಗ್ರಾಮ ಪಂಚಾಯತ್ ಹಾಗೂ ನಗರ ವಾರ್ಡ್‌ಗಳ ಮಟ್ಟದಲ್ಲಿ ಯುವಕ-ಯುವತಿಯರನ್ನು ಯಾವುದೇ ಜಾತಿ, ಧರ್ಮ, ಭಾಷೆ ಅಥವಾ ವರ್ಗಭೇದವಿಲ್ಲದೆ ಒಗ್ಗೂಡಿಸಿ, ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾಗಲಿದೆ. ವಾರ್ಷಿಕ 10 ಲಕ್ಷ ರೂಪಾಯಿ ಭರಿಸಲಿದೆ.ಇದರ ಮೂಲಕ ನವಕರ್ನಾಟಕ ನಿರ್ಮಾಣಕ್ಕೆ ಯುವಶಕ್ತಿಯ ಅಮೂಲ್ಯ ಕೊಡುಗೆ ದೊರೆಯಲಿದ್ದು, ಸಮಾಜದ ಹಳೆಯ ಗತವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪರಿಣಾಮಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೂಕ್ತ ಮೀಸಲಾತಿ ಕಲ್ಪಿಸಿರುವುದು ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತ ಸೌಹಾರ್ದತೆಯ ಪ್ರತೀಕವಾಗಿದೆ. ಎಲ್ಲ ಸಮುದಾಯಗಳ ಯುವಜನರಿಗೆ ಸಮಾನ ಅವಕಾಶ ಕಲ್ಪಿಸುವ ಈ ಯೋಜನೆ ರಾಜ್ಯದ ಸಾಮಾಜಿಕ ಏಕತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ, ಬ್ಲಾಕ್ ಹಾಗೂ ವಲಯ ಮಟ್ಟದ ಪದಾಧಿಕಾರಿಗಳು, ಸದಸ್ಯರು, ಪಂಚಾಯತ್ ಸ್ಥಳೀಯ ಪ್ರತಿನಿಧಿಗಳು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ತಕ್ಷಣವೇ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರನ್ನು ಮೊಬೈಲ್ ಆ್ಯಪ್ ಮೂಲಕ ನೋಂದಾಯಿಸುವ ಕಾರ್ಯವನ್ನು ಇದೇ ತಿಂಗಳ 18ರಿಂದ ಆರಂಭಿಸಿ ಯಶಸ್ವಿಗೊಳಿಸಬೇಕು ಎಂದು ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

