ವಾಷಿಂಗ್ಟನ್: ಅಮೆರಿಕದ ಇಡಾಹೊದಲ್ಲಿರುವ ‘ಇನ್-ಎನ್-ಔಟ್ ಬರ್ಗರ್’ ರೆಸ್ಟೋರೆಂಟ್ನಲ್ಲಿ ಕಳೆದ ವಾರ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಹೊಸ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಬಂದೂಕುಧಾರಿ ರೆಸ್ಟೋರೆಂಟ್ನ ಕಿಟಕಿಯ ಬಳಿ ನಾಲ್ಕು ಬಾರಿ ತೆರಳಿ ಗುಂಡು ಹಾರಿಸಿದ್ದಾನೆ. ಈ ವೇಳೆ ರೆಸ್ಟೋರೆಂಟ್ನ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.

ಬಳಿಕ ಬಂದೂಕುಧಾರಿ ರೆಸ್ಟೋರೆಂಟ್ನಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸಮೀಪದ ಅಂಗಡಿಯ ಸಿಬ್ಬಂದಿಯೊಬ್ಬರು ಧೈರ್ಯದಿಂದ ಸ್ಥಳಕ್ಕೆ ಧಾವಿಸಿ, ಹೊರಗಿದ್ದ ಬಂದೂಕುಧಾರಿಯನ್ನು ತಡೆದಿದ್ದಾರೆ. ಅವರ ಸಮಯೋಚಿತ ಮಧ್ಯಪ್ರವೇಶದಿಂದ ಮತ್ತಷ್ಟು ಪ್ರಾಣಹಾನಿ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. 24 ವರ್ಷದ ಆರೋಪಿ ಚಾಡ್ ವಿಲಿಯಮ್ಸ್ ಬಳಿಕ ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟ್ವಿನ್ ಫಾಲ್ಸ್ ಪೊಲೀಸ್ ಮುಖ್ಯಸ್ಥ ಮ್ಯಾಥ್ಯೂ ಹಿಕ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

