ಪುತ್ತೂರು: ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆಯಿತು.
ಕೆಯ್ಯೂರು ಗ್ರಾಮದ ಮುಂಡೂರಿನಲ್ಲಿ ಮಹಿಳೆಗೆ ಬಸ್ಸು ನಿಲ್ಲಿಸದಿರುವುದಕ್ಕೆ ಸಂಬಂಧಿಸಿ ಚಾಲಕನಿಗೆ ನೋಟಿಸ್ ನೀಡಲಾಗಿದೆ ಎಂದು ಕೆಎಸ್ಆರ್ ಟಿಸಿ ಪುತ್ತೂರು ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಮಾಹಿತಿ ನೀಡಿದ್ದು, ಈ ವೇಳೆ ಅಧ್ಯಕ್ಷರು ಪ್ರತಿಕ್ರಿಯಿಸಿ ಕೇವಲ ನೋಟಿಸ್ ನೀಡಿದರೆ ಸಾಲುವುದಿಲ್ಲ. ಆ ರೀತಿ ಗ್ರಾಮೀಣ ಭಾಗದಲ್ಲಿ ಬಡ ಮಹಿಳೆಯರು ಕೂಲಿ ಕೆಲಸಕ್ಕೆ ಬಂದು ಮನೆಗೆ ಹಿಂದಿರುಗುವ ಸಂದರ್ಭ ಚಾಲಕರು-ನಿರ್ವಾಹಕರು ಬಸ್ಸು ನಿಲ್ಲಿಸದೆ ದುವರ್ತನೆ ತೋರುವುದು ಸರಿಯಲ್ಲ. ಅವರ ಮನೆಯಲ್ಲೂ ಮಹಿಳೆಯರು ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ನೋಟಿಸ್ ಗೆ ಯಾವ ರೀತಿ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಸಮಿತಿಯ ಗಮನಕ್ಕೆ ತರುವಂತೆ ಸೂಚಿಸಿದರು.

ಜಿಡೆಕಲ್ಲು ಸರಕಾರಿ ಕಾಲೇಜಿನ ಬಸ್ಸಿನ ಬೇಡಿಕೆ ಏನಾಯಿತು ಎಂದು ಪ್ರಶ್ನಿಸಿದ ವೇಳೆ ಒಂದು ಬಸ್ಸು ಹೋಗುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಒಂದು ಬಸ್ಸು ಸಾಲುವುದಿಲ್ಲ, ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಹೀಗಾಗಿ ಬೇರೆ ರೂಟ್ ಗಳಿಂದ ಹೊಂದಾಣಿಕೆ ಮಾಡಿಕೊಂಡು ಹೆಚ್ಚುವರಿ ಬಸ್ಸು ಹಾಕುವಂತೆ ಅಧ್ಯಕ್ಷರು ಸೂಚಿಸಿದರು.

ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ 446 ಮಂದಿ ಯುವನಿಧಿ ಫಲಾನುಭವಿಗಳಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಂಜೂಷ ಅವರು ಸಭೆಗೆ ಮಾಹಿತಿ ನೀಡಿದರು. ಹಿಂದೆ ಯುವನಿಧಿ ಪಡೆದ ಫಲಾನುಭವಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು. ಪುತ್ತೂರಿನ ಮುರದಲ್ಲಿ ಫಲಾನುಭವಿಯೊಬ್ಬರು ಯುವನಿಧಿಯ ಹಣದಿಂದ ಆಯುರ್ವೇದದಲ್ಲಿ ಎಂಡಿ ಮಾಡುತ್ತಿದ್ದು, ಅಂತಹ ಸಾಧಕರನ್ನು ಭೇಟಿಯಾಗಿ ಮಾತುಕತೆ ಮಾಡುವ ಕಾರ್ಯ ಆಗಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಅನ್ನಭಾಗ್ಯ ಅಕ್ಕಿಯ ವಿತರಣೆಯ ಕುರಿತು ಆಹಾರಲಿಲಾಖೆಯ ಸರಸ್ವತಿ ಅವರು ಮಾಹಿತಿ ನೀಡಿದರು. ಅಕ್ಕಿ ವಿತರಣೆಗೆ ಸಂಬಂಧಿಸಿ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿದ್ದೀರಾ, ಏನಾದರೂ ಸಮಸ್ಯೆಗಳು ಕಂಡುಬಂದಿದೆಯೇ, ಕೆಲವು ಕಡೆ ಅಕ್ಕಿಯ ಕೊರತೆ, ಗುಣಮಟ್ಟದ ಕೊರತೆಯ ಕುರಿತು ದೂರುಗಳು ಬರುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

ಉಪ್ಪಿನಂಗಡಿ ಮೆಸ್ಕಾಂ ಶಾಖೆಯ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಮರುಪರಿಶೀಲನೆಯ ಕಾರ್ಯ ನಿಧಾನವಾಗಿದ್ದು, ಆ ಕುರಿತು ಮಾಹಿತಿ ಕೇಳಿದರೆ ಅಲ್ಲಿನ ಸಿಬಂದಿ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಯವರು ಸರಿ ಇದ್ದರೂ, ಸಿಬಂದಿಗಳ ಜತೆ ಹೊಂದಾಣಿಕೆ ಕೊರತೆ ಕಾಣುತ್ತಿದೆ. ಗ್ಯಾರಂಟಿ ಯೋಜನೆ ಕುರಿತು ತಾತ್ಸಾರ ಭಾವನೆ ಇದ್ದು, ಸಮಿತಿ ಸದಸ್ಯರು ಯಾರೆಂದು ಗೊತ್ತಿಲ್ಲ. ಅವರು ತಮ್ಮ ವರ್ತನೆಯನ್ನು ಮುಂದುವರಿಸಿದಲ್ಲಿ ಸಂಬಂಧಪಟ್ಟವರಿಗೆ ಲಿಖಿತ ದೂರು ನೀಡಲಾಗುವುದು ಎಂದು ಸಮಿತಿ ಸದಸ್ಯ ಸೇಸಪ್ಪ ನೆಕ್ಕೀಲು ಅವರು ಸಭೆಗೆ ತಿಳಿಸಿದರು.

ಅದರ ಕುರಿತು ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದು ಮೆಸ್ಕಾಂ ಪುತ್ತೂರು ಗ್ರಾಮಾಂತರ ಎಇಇ ಶಿವಶಂಕರ್ ಅವರು ತಿಳಿಸಿದರು. ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರನ್ನು ಒಳಗೊಂಡು ಸಭೆ ಕರೆಯಬೇಕು. ಜತೆಗೆ ತಾಲೂಕಿನಲ್ಲಿ ಪ್ರತಿ ಲೈನ್ ಮ್ಯಾನ್ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಮರುಪರಿಶೀಲನೆಗೆ ಬಾಕಿ ಇರುವ ಮನೆಗಳ ಕುರಿತು ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಒಟ್ಟು 3,77,12,889 ಫಲಾನುಭವಿಗಳಿಗೆ 615,46,35,580 ರೂ. ಮೊತ್ತ ಬಿಡುಗಡೆಯಾಗಿದೆ ಎಂದು ಅಧ್ಯಕ್ಷರು ಸಭೆಗೆ ವಿವರಿಸಿದರು. ಪುತ್ತೂರು ತಾ.ಪಂ.ಯೋಜನಾಧಿಕಾರಿ ಶೋಭಾ ಅವರು ಸ್ವಾಗತಿಸಿ, ವಂದಿಸಿದರು.

