ಮಂಜೇಶ್ವರ: ತುಳು ಭಾಷೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ಪ್ರಮುಖ ಕೇಂದ್ರವಾಗಿ ಕಾಸರಗೋಡಿನಲ್ಲಿ ಸ್ಥಾಪನೆಗೊಂಡಿದ್ದ ‘ಕೇರಳ ತುಳು ಅಕಾಡೆಮಿ’ಯು ಇಂದು ಯಾವುದೇ ಚಟುವಟಿಕೆಗಳಿಲ್ಲದೆ ಸಂಪೂರ್ಣ ನಿಷ್ಕ್ರಿಯಗೊಂಡು ನೇಪಥ್ಯಕ್ಕೆ ಸರಿಯುತ್ತಿದೆ.


ಎರಡು ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಮಂಜೇಶ್ವರ ಹೊಸಂಗಡಿ ದುರ್ಗಿದದಲ್ಲಿ ಉದ್ಘಾಟಿಸಿದ್ದ ಈ ಅಕಾಡೆಮಿಯು, ಹಿರಿಯ ತುಳು ವಿದ್ವಾಂಸ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ನೇತೃತ್ವದಲ್ಲಿ ಆರಂಭದಲ್ಲಿ ಅತ್ಯುತ್ಸಾಹದಿಂದ ಕಾರ್ಯನಿರ್ವಹಿಸಿತ್ತು. ತಿರುವನಂತಪುರ, ಮುಂಬೈ ಸೇರಿದಂತೆ ಹಲವೆಡೆ ವಿಚಾರ ಸಂಕಿರಣಗಳನ್ನು ನಡೆಸಿ, ಮೂರು ತಿಂಗಳಿಗೊಮ್ಮೆ ‘ತೆಂಬರೆ’ ಎನ್ನುವ ಪುಸ್ತಕವನ್ನೂ ಪ್ರಕಟಿಸುತ್ತಿತ್ತು.
ಕಳೆದ ಸಲದ ಎಡ ರಂಗ ಸರ್ಕಾರದ ಕಾಲಾವಧಿಯಲ್ಲಿ
ಉತ್ತಮ ಕಾರ್ಯ ನಡೆದಿರುವುದಾಗಿ ಅವಕಾಶವಾದವನ್ನು ಉಣ್ಣಯಿಸುತ್ತಿರುವ ಮಾಜಿ ತುಳು ಅಕಾಡಮಿ ಅಧ್ಯಕ್ಷ ಕೆ ಆರ್ ಜಯಾನಂದರವರು ಕೆಲವೊಂದು ಸುದ್ದಿ ಮಾಧ್ಯಮಗಳಲ್ಲಿ ಅಪ ಪ್ರಚಾರಗಳು ನಡೆಯುತ್ತಿದೆ. ಆದರೆ ನನ್ನ ಆಡಳಿತಾವಧಿಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಅತ್ಯುತ್ಸಾಹದಿಂದ ನಿರ್ವಹಿಸಿರುವುದಾಗಿ ಅವರು ಹೇಳಿದರು.

ಆದರೆ ಈಗಿನ ಹೊಸ ಸರ್ಕಾರದ ಆಗಮನದ ಬಳಿಕ ಅಕಾಡೆಮಿ ಕಚೇರಿಗೆ ನಿತ್ಯ ಬೀಗ ಜಡಿಯಲಾಗುತ್ತಿದ್ದು, ಗ್ರಂಥಾಲಯ ಹಾಗೂ ಸಭಾಂಗಣವಿದ್ದರೂ ಸಾರ್ವಜನಿಕ ಬಳಕೆಗೆ ಸಿಗುತ್ತಿಲ್ಲ. ಕೇವಲ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಸಾಹಿತ್ಯ ಪ್ರಕಟನೆ, ಸಂಶೋಧನೆ ಮತ್ತು ಅಕಾಡೆಮಿಕ್ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಪ್ರಭಾವಿ ವ್ಯಕ್ತಿಗಳ ನಾಯಕತ್ವವಿದ್ದರೂ ತುಳು ಭವನವು ಇಂದು ಬರೀ ಹೆಸರಿಗೆ ಮಾತ್ರ ಉಳಿದುಕೊಂಡಿದೆ ಎಂದು ಸಾರ್ವಜನಿಕ ವಲಯದಿಂದ ತೀವ್ರ ಆತಂಕ ಹಾಗೂ ಅಸಮಾಧಾನ ವ್ಯಕ್ತವಾಗಿದೆ.
ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಶಾಲಾ-ಕಾಲೇಜುಗಳನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಾಹಿತಿ-ಕಲಾವಿದರಿಗೆ ಪ್ರಶಸ್ತಿ ನೀಡುವುದು ಮತ್ತು ದಾಖಲೀಕರಣದಂತಹ ಅಕಾಡೆಮಿಕ್ ಕೆಲಸಗಳನ್ನು ಮರುಪ್ರಾರಂಭಿಸಬೇಕು ಎಂದು ಸ್ಥಳೀಯರು ಹಾಗೂ ಸಾಹಿತ್ಯಾಸಕ್ತರು ಆಗ್ರಹಿಸಿದ್ದಾರೆ.

