ಕುಂಬಳೆ ಕುಟುಂಬ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಡಿವೈಎಫ್‌ಐ ಮಾರ್ಚ್ವೈದ್ಯ-ಸಿಬ್ಬಂದಿ ಕೊರತೆ, ಅಸೌಕರ್ಯ ಪರಿಹರಿಸಲು ಆಗ್ರಹ; ಸುಳ್ಳು ಕೇಸ್ ಹಿಂಪಡೆಯುವಂತೆ ಒತ್ತಾಯ

ಕುಂಬಳೆ: ಕುಟುಂಬ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆ, ಅಸೌಕರ್ಯ ಹಾಗೂ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಕುಟುಂಬ ಆರೋಗ್ಯ ಕೇಂದ್ರಕ್ಕೆ ಮಾರ್ಚ್ ನಡೆಯಿತು.

ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸುವವರನ್ನೇ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸಿಪಿಐಎಂ ಕುಂಬಳೆ ಏರಿಯಾ ಸೆಕ್ರೆಟರಿ ಸಿ.ಎ. ಝುಬೈರ್ ಮಾರ್ಚ್ ಉದ್ಘಾಟಿಸಿದರು. ಕೇರಳದ ಆರೋಗ್ಯ ಕ್ಷೇತ್ರದ ಸಾಧನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯಲಾಗಿತ್ತು. ಆದರೆ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಆರೋಗ್ಯ ಕ್ಷೇತ್ರದ ವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.

ಅವ್ಯವಸ್ಥೆಯನ್ನು ಪ್ರಶ್ನಿಸಿದ ಸಿಐಟಿಯು ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿರುವ ಸಮಾಜಸೇವಕರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಡಿವೈಎಫ್‌ಐ ಕುಂಬಳೆ ಏರಿಯಾ ಸೆಕ್ರೆಟರಿ ಸತ್ಯನ್ ಸ್ವಾಗತಿಸಿದರು. ಬ್ಲಾಕ್ ಕಾರ್ಯನಿರ್ವಾಹಕ ಸದಸ್ಯ ಸೈನುಲ್ ಹೈರಾಸ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಬ್ಲಾಕ್ ಅಧ್ಯಕ್ಷ ಮಜೀದ್ ಎಂ.ಎಚ್., ಸಿಪಿಐಎಂ ಕುಂಬಳೆ ಲೋಕಲ್ ಸೆಕ್ರೆಟರಿ ಪ್ರಸಾದ್ ಕುಮಾರ್ ಹಾಗೂ ಆಟೋರಿಕ್ಷಾ ಕಾರ್ಮಿಕರ ಸಿಐಟಿಯು ಯೂನಿಯನ್ ನಾಯಕರಾದ ಅಬ್ಬಾಸ್ ಪೇರಾಲ್ ಸೇರಿದಂತೆ ಹಲವರು ಮಾತನಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!