ಕಾಸರಗೋಡು: ತೃಕರಿಪುರ ಬೀರಿಚ್ಚೇರಿಯ ಕುಲೇರಿ ಎಂಬಲ್ಲಿ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸ್ಪೋಟಗೊಂಡು ಅಪಾರ ಹಾನಿ ಸಂಭವಿಸಿದೆ. ಆದರೆ ಸಕಾಲದಲ್ಲಿ ಕುಟುಂಬದವರು ಹೊರಗೆ ಓಡಿದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.

ಕೆ.ಪಿ. ನಿಸಾರ್ ಎಂಬವರ ಮನೆಯಲ್ಲಿ ಆಹಾರ ತಯಾರಿಸುವ ವೇಳೆ ಅನಿಲ ಸೋರಿಕೆಯಿಂದ ಈ ಅಫಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ಕೇವಲ ಎರಡು ತಿಂಗಳ ಕಂದಮ್ಮ ಸೇರಿದಂತೆ ನಾಲ್ವರು ಸದಸ್ಯರಿದ್ದರು. ಸ್ಫೋಟದ ಭೀಕರ ಶಬ್ದ ಕೇಳುತ್ತಿದ್ದಂತೆ ಎಚ್ಚೆತ್ತವರು ಮಗುವಿನೊಂದಿಗೆ ಕೂಡಲೇ ಹೊರಗೋಡಿ ಜೀವ ಉಳಿಸಿಕೊಂಡಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ತೃಕರಿಪುರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಪೋಟದ ತೀವ್ರತೆಗೆ ಎರಡಂತಸ್ತಿನ ಮನೆಯ ಅಡುಗೆ ಕೋಣೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಫ್ರಿಡ್ಜ್, ಮಿಕ್ಸಿ ಸೇರಿದಂತೆ ಅನೇಕ ಗೃಹೋಪಕರಣಗಳು ಬೆಂಕಿಗಾಹುತಿಯಾಗಿವೆ.

