ಉಜಿರೆ: ಎಂಡೋಸಲ್ಫಾನ್ ಬಾಧಿತರು ಹಾಗೂ ವಿಶೇಷ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಉಜಿರೆಯ ಸಾನ್ನಿಧ್ಯ ಸ್ಕಿಲ್ ಟ್ರೇನಿಂಗ್ ಸೆಂಟರ್‌ನಲ್ಲಿ ಆಗಸ್ಟ್ 12ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ‘ಆಟಿ ತಿಂಗಳ ಒಂದು ದಿನ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಚರಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಶಿಕ್ಷಕರು ತಮ್ಮ ಮನೆಗಳಿಂದ ವಿವಿಧ ಬಗೆಯ ಸಾಂಪ್ರದಾಯಿಕ ತಿಂಡಿಗಳನ್ನು ತಂದು, ಕೇಂದ್ರದ ವಿಶೇಷ ಮಕ್ಕಳು ಹಾಗೂ ಸಿಬ್ಬಂದಿಗೆ ಹಂಚಿ ಸಂಭ್ರಮಿಸಿದರು. ಮಲ್ಲಿಕಾ, ಡಾ. ವಸಂತ್ ಕುಮಾರ್ ಶೆಟ್ಟಿ ಹಾಗೂ ರೋಷನ್ ಸಿಕ್ವೇರಾ ಅವರು ಚನ್ನಮನೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಸಾನ್ನಿಧ್ಯ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಸಾನ್ನಿಧ್ಯ ಶ್ರೀ ಗಣೇಶ ಸೇವಾ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಪ್ರೊ. ರಾಧಾಕೃಷ್ಣ, ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ ಕುಂಬ್ಳೆ ಹಾಗೂ ಸಾನ್ನಿಧ್ಯ ಸ್ಕಿಲ್ ಟ್ರೇನಿಂಗ್ ಸೆಂಟರ್‌ನ ಸಲಹಾ ಸಮಿತಿ ಸದಸ್ಯ ರೋಷನ್ ಸಿಕ್ವೇರಾ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಸಾನ್ನಿಧ್ಯ ಶ್ರೀ ಗಣೇಶ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀ ದೇವದತ್ತ ರಾವ್ ಅವರು ತಮ್ಮ ಪತ್ನಿಯ ವಾರ್ಷಿಕ ಸ್ಮರಣಾರ್ಥವಾಗಿ ನೀಡಿದ ಧನಸಹಾಯವನ್ನು ಕೇಂದ್ರದ ಸಿಬ್ಬಂದಿಗೆ ವಿತರಿಸಲಾಯಿತು.


ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕೇಂದ್ರದ ಕೆಲವು ವಿಶೇಷ ಮಕ್ಕಳು ಸಾಂಪ್ರದಾಯಿಕ ಉಡುಪು ಧರಿಸಿ ಭಾಗವಹಿಸಿದರು. ಶಿಕ್ಷಕ ವರ್ಗ, ಸಿಬ್ಬಂದಿ ಹಾಗೂ ವಿಶೇಷ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟಿ ಅಮಾವಾಸ್ಯೆಯ ಸಂಭ್ರಮವನ್ನು ಹಂಚಿಕೊಂಡರು.


