25 ಗಂಟೆಗಳ ದಾಸರಪದ ಗಾಯನಕ್ಕೆ ಸಂಗೀತ ಬಾಲಚಂದ್ರ ಸಜ್ಜು

ಉಡುಪಿ: ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರ್ಣಗೊಳಿಸಿರುವ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಾಧನೆಗಾಗಿ 25 ಗಂಟೆಗಳ ಕಾಲ ನಿರಂತರವಾಗಿ ದಾಸರಪದಗಳನ್ನು ಹಾಡುವ ಐತಿಹಾಸಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.


ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಗಾಯನ ಕಾರ್ಯಕ್ರಮಕ್ಕೆ ‘ಪಂಚವಿಂಶತಿ’ ಎಂದು ಹೆಸರಿಡಲಾಗಿದೆ. ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ಬಾಲಚಂದ್ರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಆ.23ರಂದು ಬೆಳಿಗ್ಗೆ 6.30ಕ್ಕೆ ಆರಂಭವಾಗುವ ಗಾಯನವು ಆ.24ರಂದು ಬೆಳಿಗ್ಗೆ 7.30ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟು 25 ಗಂಟೆ (1,500 ನಿಮಿಷ) ಕಾಲ ನಿರಂತರವಾಗಿ ದಾಸರಪದಗಳ ಗಾಯನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಲಾಗಿರುವ 250 ದಾಸರಪದಗಳನ್ನು ಪ್ರಸ್ತುತಪಡಿಸಲಾಗುವುದು. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಹಾಗೂ ತಬಲಾ ವಾದಕರನ್ನೊಳಗೊಂಡ ಎರಡು ಪ್ರತ್ಯೇಕ ಸಹಕಲಾವಿದರ ತಂಡಗಳು ನಿರಂತರವಾಗಿ ಲೈವ್ ಸಂಗೀತ ಸಾಥ್ ನೀಡಲಿವೆ. ಮಹಿಳಾ ಗಾಯಕಿಯೊಬ್ಬರು ಪ್ರಮುಖವಾಗಿ ದಾಸರಪದಗಳನ್ನು ಆಯ್ಕೆ ಮಾಡಿಕೊಂಡು ಇಷ್ಟು ಸುದೀರ್ಘ ಅವಧಿಯವರೆಗೆ ನಿರಂತರವಾಗಿ ಗಾಯನ ಮಾಡುತ್ತಿರುವುದು ರಾಜ್ಯದಲ್ಲೇ ಅಪರೂಪದ ಹಾಗೂ ಮೊದಲ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!