ತುಳು ವಿಕಿಪೀಡಿಯಾಗೆ ದಶಮಾನೋತ್ಸವ ಸಂಭ್ರಮ

ಮಂಗಳೂರು: ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುತ್ತಿರುವ ತುಳು ವಿಕಿಪೀಡಿಯಾ ತನ್ನ ಲೈವ್ ಆವೃತ್ತಿಯ 10ನೇ ವರ್ಷವನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ವತಿಯಿಂದ ಸೆಪ್ಟೆಂಬರ್ 12 ಮತ್ತು 13ರಂದು ನಗರದ ಎ.ಜೆ. ಗ್ರಾಂಡ್ ಹೋಟೆಲ್‌ನಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರೂಪ್ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಆರಂಭವಾದ ತುಳು ವಿಕಿಪೀಡಿಯಾ ಎಂಟು ವರ್ಷಗಳ ಕಾಲ ಇಂಕ್ಯುಬೇಟರ್ ಹಂತದಲ್ಲಿದ್ದು, 2016ರ ಆಗಸ್ಟ್ 6ರಂದು ಲೈವ್ ಆವೃತ್ತಿಯಾಗಿ ಹೊರಹೊಮ್ಮಿತು. ಇದರೊಂದಿಗೆ ತುಳು ಭಾರತೀಯ ಭಾಷೆಗಳ ವಿಕಿಪೀಡಿಯಾ ಆವೃತ್ತಿಗಳಲ್ಲಿ 23ನೇ ಸ್ಥಾನ ಪಡೆದಿದೆ.

ಪ್ರಸ್ತುತ ತುಳು ವಿಕಿಪೀಡಿಯಾದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 3,800ಕ್ಕೂ ಹೆಚ್ಚು ಲೇಖನಗಳಿವೆ. ತುಳುನಾಡಿನ ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಲೆ, ಸಾಹಿತ್ಯ, ಪ್ರಕೃತಿ, ಆಚರಣೆ ಹಾಗೂ ಸಾಂಸ್ಕೃತಿಕ ಪರಂಪರೆಯ ಕುರಿತ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ.

ಡಾ. ಯು.ಬಿ. ಪವನಜ ಅವರ ಮಾರ್ಗದರ್ಶನದೊಂದಿಗೆ ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಎ.ವಿ. ನಾವಡ, ಕೆ.ಪಿ. ರಾವ್, ವಾಮನ ನಂದಾವರ ಸೇರಿದಂತೆ ಹಲವು ವಿದ್ವಾಂಸರು ಹಾಗೂ ಸ್ವಯಂಸೇವಕರ ಸಹಕಾರದಿಂದ ತುಳು ವಿಕಿಪೀಡಿಯಾ ಬೆಳೆದು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಯಗಳನ್ನು ದಾಖಲಿಸಿ, ಹೊಸ ಸಂಪಾದಕರನ್ನು ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಡಾ. ವಿಶ್ವನಾಥ ಬದಿಕಾನ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭರತೇಶ ಅಲಸಂಡೆಮಜಲು, ಕಿಶೋರ್ ಕುಮಾರ್ ರೈ ಶೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!