ಕಾಸರಗೋಡು: ಕರ್ತವ್ಯದ ಹಾದಿಯೇ ಕಣ್ಣೀರಿನ ಕಡಲಾದ ದುರ್ಘಟನೆ ಹೊಸದುರ್ಗದ ಕಾಣಿರಪೊಯಿಲ್ ಕುಳಂಜಾಟ್‌ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಕೆಂಪುಕಲ್ಲು ಇಳಿಸಿ ವಾಪಸ್ ಲಾರಿ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಟಿಪ್ಪರ್, ಪಿ. ಗೋಪಾಲನ್ ಎಂಬವರ ಮನೆಯ ಅಡುಗೆ ಕೊಠಡಿಯ ಮೇಲೆಯೇ ಪ್ರತ್ಯಕ್ಷವೋ ಎಂಬಂತೆ ಬುಡಮೇಲಾಗಿ ಬಿದ್ದಿದೆ.

ಈ ಭೀಕರ ದುರಂತದಲ್ಲಿ ಲಾರಿಯ ಅಡಿಯಲ್ಲಿ ಸಿಲುಕಿ ತೀವ್ರವಾಗಿ ನರಳಾಡಿದ ಚಾಯೋಂ ನಿವಾಸಿ ಸಾದಿಕ್ (40) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕಣ್ಣುಮುಚ್ಚಿ ತೆರೆಯುವುದರೊಳಗೆ ನಡೆದ ಈ ಅವಘಡದಿಂದ ಮನೆಯ ಗೋಡೆಗಳು ಧ್ವಂಸಗೊಂಡಿದ್ದು, ಕುಟುಂಬಸ್ಥರು ಮತ್ತು ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ವಿಧಿಯ ಕ್ರೂರ ಆಟಕ್ಕೆ ಅಮಾಯಕ ಜೀವವೊಂದು ಬಲಿಯಾಗಿರುವುದು ಇಡೀ ಪ್ರದೇಶದಲ್ಲಿ ಶೋಕಮೂಡಿಸಿದೆ.

