ಮಂಜೇಶ್ವರ: ಓಣಂ ರಜೆಗಾಗಿ ಮನೆ ಮಂದಿ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು, ಶಾಲಾ ವಿದ್ಯಾರ್ಥಿನಿಯೊಬ್ಬಳ ಕಲಿಕೆಯ ಖರ್ಚಿಗಾಗಿ ತೆಗೆದಿಟ್ಟಿದ್ದ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಮಂಜೇಶ್ವರ ಸಮೀಪದ ತೂಮಿನಾಡಿನಲ್ಲಿ ನಡೆದಿದೆ.

ಕುಂಜತ್ತೂರು ಸಮೀಪದ ತೂಮಿನಾಡಿನಲ್ಲಿರುವ ದಿವಂಗತ ದೇವಕಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಈ ಮನೆಯಲ್ಲಿ ಎರಡು ಕುಟುಂಬಗಳು ವಾಸವಾಗಿದ್ದು, ಇವರಲ್ಲಿ ಸತೀಶ್ ಎಂಬವರ ಕುಟುಂಬವು ಓಣಂ ರಜೆ ನಿಮಿತ್ತ ಬುಧವಾರ ಸಂಬಂಧಿಕರ ಮನೆಗೆ ತೆರಳಿತ್ತು.
ಸೋಮವಾರ ಮರಳಿ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ. ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ, ಮೂರು ಕೊಠಡಿಗಳಲ್ಲಿದ್ದ ಕಪಾಟುಗಳನ್ನು ಒಡೆದು ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಲಾಗಿದೆ.

ಈ ಕೃತ್ಯದಲ್ಲಿ ವಿದ್ಯಾರ್ಥಿನಿಯಾಗಿರುವ ಸತೀಶ್ ಅವರ ಪುತ್ರಿ ಪ್ರೀತಿಕಾಳ ಶಾಲೆಯ ಕಲಿಕಾ ಖರ್ಚಿಗಾಗಿ ಜೋಪಾನ ಮಾಡಿಟ್ಟಿದ್ದ 3000 ರೂಪಾಯಿ ನಗದನ್ನು ಕಳ್ಳರು ಎಗರಿಸಿದ್ದಾರೆ. ಇನ್ನೊಂದು ಕುಟುಂಬವು ಇನ್ನೂ ವಾಪಸ್ ಬಾರದ ಕಾರಣ, ಅವರ ಕೊಠಡಿಯಿಂದ ಏನೇನು ಕಳುವಾಗಿದೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ವಾರ್ಡ್ ಸದಸ್ಯ ಇಲ್ಯಾಸ್ ಹಾಗೂ ಮಂಜೇಶ್ವರ ಎಸ್.ಐ. ಶಬರಿ ನೇತೃತ್ವದ ಪೊಲೀಸರು ಭೇಟಿ ನೀಡಿ, ಪ್ರಾಥಮಿಕ ಮಾಹಿತಿ ಕಲೆಹಾಕಿದ್ದು ತನಿಖೆ ಮುಂದುವರಿಸಿದ್ದಾರೆ.

