ಖರ್ಗೆ ಅವಮಾನ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ಖಂಡನೀಯ: ದಿನೇಶ್ ಮುಳೂರು

ಮಂಗಳೂರು:ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ದಲಿತ ಸಮುದಾಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿರುವ ಪ್ರಕರಣದಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 10ರಂದು ಉತ್ತರ ಪ್ರದೇಶದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದರು. ಮರುದಿನ ಅದೇ ಸ್ಥಳದಲ್ಲಿ ಹೋಮ-ಹವನ ನಡೆಸಿ ಶುದ್ಧೀಕರಣ ಮಾಡಿರುವುದು ಜಾತಿ ತಾರತಮ್ಯದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇದು ಖರ್ಗೆ ಅವರಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.

ಈ ಘಟನೆಯನ್ನು ಖಂಡಿಸಿ ರಾಹುಲ್ ಗಾಂಧಿ ಅವರು ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು. ಆದರೆ, ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿ ಹಾಗೂ ಸಂಘ ಪರಿವಾರದ ದಲಿತ ವಿರೋಧಿ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಖರ್ಗೆ ಅವರಿಗೆ ಅವಮಾನ ಮಾಡಿದ ಆರೋಪದ ಕುರಿತು ಪ್ರಕರಣ ದಾಖಲಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ದೇಶದ ದಲಿತ ಸಮುದಾಯದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನದಂತೆ ಕಾಣುತ್ತಿದೆ ಎಂದರು.

ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದು, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡುವುದರೊಂದಿಗೆ ಯುವಕರಿಗೆ ಮತದಾನದ ಹಕ್ಕು ದೊರಕಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ದಲಿತರು ಹಾಗೂ ಶೋಷಿತ ವರ್ಗಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿತ್ತು. ದೇವದಾಸಿ ಪದ್ಧತಿ ಹಾಗೂ ಮಲ ಹೊರುವ ಪದ್ಧತಿಯಂತಹ ಅನಿಷ್ಟ ಆಚರಣೆಗಳ ನಿರ್ಮೂಲನೆಗೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ವಿವರಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ ಬಳಿಕವೂ ದಲಿತರ ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆಗಾಗಿ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಮನುವಾದಿ ಮನೋಭಾವಗಳು ಇಂದಿಗೂ ಮುಂದುವರಿದಿವೆ ಎಂದು ಆರೋಪಿಸಿದರು.

ಉನ್ನಾವೋ ಪ್ರಕರಣ ಸೇರಿದಂತೆ ಹಲವು ಸಂದರ್ಭಗಳಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನವಾಗಿದೆ ಎಂದು ಆರೋಪಿಸಲಾಗುತ್ತಿರುವ ಸಂದರ್ಭದಲ್ಲಿಯೂ ಅವರು ದಲಿತರ ಪರವಾಗಿ ನಿಂತಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ದಲಿತರು ಹಾಗೂ ಶೋಷಿತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ದೇಶದ ದಲಿತರು ಹಾಗೂ ಶೋಷಿತ ವರ್ಗದ ಜನರು ರಾಹುಲ್ ಗಾಂಧಿ ಅವರೊಂದಿಗೆ ನಿಲ್ಲಲಿದ್ದಾರೆ ಎಂಬ ಸಂದೇಶವನ್ನು ನೀಡುವುದಾಗಿ ದಿನೇಶ್ ಮುಳೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಟಿ. ಹೊನ್ನಯ್ಯ , ಪ್ರೇಮನಾಥ್ ಬಲ್ಲಾಳ್‌ಬಾಗ್ ,ರವಿ ಸುಂಕದಕಟ್ಟೆ, ಗೌತಮ್ ರಾಜ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!