ಬಿಸಿರೋಡಿನಲ್ಲಿ ನಿತ್ಯ ಟ್ರಾಫಿಕ್ ಜಾಮ್: ಕಲ್ಲಡ್ಕದಿಂದ ಕೈಕಂಬವರೆಗೆ ಪ್ಲೈ ಓವರ್ ನಿರ್ಮಿಸಿ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ದಿನದಿಂದ ದಿನಕ್ಕೆ ಜನದಟ್ಟಣೆಯ ನಗರವಾಗಿ ಬೆಳೆಯುತ್ತಿರುವ ಬಿಸಿರೋಡಿನಲ್ಲಿ ವಾಹನ ದಟ್ಟಣೆ ಹಾಗೂ ನಿತ್ಯದ ಟ್ರಾಫಿಕ್ ಜಾಮ್ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿ ಪರಿಣಮಿಸುತ್ತಿದೆ.


ಸುಮಾರು ಎರಡು ದಶಕಗಳ ಹಿಂದೆ ಈ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ರಸ್ತೆ ಬದಿಯ ಅಗಲೀಕರಣವೂ ನಡೆದಿದ್ದರೂ, ನಗರ ಬೆಳವಣಿಗೆ ಹಾಗೂ ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆ ವಿಸ್ತರಣೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಪರಿಣಾಮವಾಗಿ ಇದೀಗ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಮಸ್ಯೆ ತೀವ್ರಗೊಂಡಿದೆ.


ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ; ವಿಸ್ತರಣೆಗೆ ಜಾಗವೆಲ್ಲಿ?
ಬಿಸಿರೋಡು ನಗರ ವಿಸ್ತಾರಗೊಳ್ಳುತ್ತಿದ್ದಂತೆ ರಸ್ತೆ ಬದಿಯಲ್ಲಿ ಅಂಗಡಿ, ವಾಣಿಜ್ಯ ಮಳಿಗೆ ಹಾಗೂ ಇತರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ರಸ್ತೆ ಬದಿಯ ಲಭ್ಯ ಜಾಗ ಮತ್ತಷ್ಟು ಕಡಿಮೆಯಾಗುತ್ತಿದ್ದು, ವಾಹನ ನಿಲುಗಡೆ ಹಾಗೂ ಪಾದಚಾರಿಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು.


ಒಂದೆಡೆ ಬಿಸಿರೋಡು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತಕ್ಕಂತೆ ರಸ್ತೆ ಹಾಗೂ ಸಂಚಾರ ವ್ಯವಸ್ಥೆ ಅಭಿವೃದ್ಧಿಯಾಗದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ನಗರ ಬೆಳೆಯುತ್ತಿದೆ; ಆದರೆ ರಸ್ತೆ ಮಾತ್ರ ಹಳೆಯ ಅಳತೆಯಲ್ಲೇ ಉಳಿದಿದೆ ಎಂಬ ಸ್ಥಿತಿ ನಿರ್ಮಾಣವಾಗಿದೆ.


ದಿಶಾ ಸಭೆಯಲ್ಲಿ ಶಾಸಕರಿಂದ ಪ್ರಸ್ತಾಪ
ಈ ಗಂಭೀರ ಸಮಸ್ಯೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಪ್ರಸ್ತಾಪಿಸಿದ್ದಾರೆ. ಬಿಸಿರೋಡಿನ ನಿತ್ಯದ ಟ್ರಾಫಿಕ್ ಜಾಮ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
ಇದೇ ವೇಳೆ ಕಲ್ಲಡ್ಕದಿಂದ ಕೈಕಂಬದವರೆಗೆ ಫ್ಲೈಓವರ್ ನಿರ್ಮಾಣ ಮಾಡುವ ಬೇಡಿಕೆಯನ್ನೂ ಶಾಸಕ ರಾಜೇಶ್ ನಾಯ್ಕ್ ಅವರು ಮುಂದಿಟ್ಟಿದ್ದಾರೆ. ಈ ಯೋಜನೆ ಅನುಷ್ಠಾನಗೊಂಡರೆ ಬಿಸಿರೋಡು ಸೇರಿದಂತೆ ಈ ಪ್ರಮುಖ ರಸ್ತೆ ಮಾರ್ಗದಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡಲು ಪರಿಣಾಮಕಾರಿ ಪರಿಹಾರವಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.


ಆರುಲೇನ್ ರಸ್ತೆಯ ಪ್ರಸ್ತಾಪವೂ ಸರ್ಕಾರದ ಮುಂದಿದೆ
ಕಲ್ಲಡ್ಕ–ಕೈಕಂಬ ಭಾಗದಲ್ಲಿ ಆರುಲೇನ್ ರಸ್ತೆ ನಿರ್ಮಾಣದ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ವೇಗ ದೊರೆತರೆ ಬಿಸಿರೋಡು ಸೇರಿದಂತೆ ಈ ಭಾಗದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯವಾಗಲಿದೆ.
ಆದರೆ, ದೊಡ್ಡ ಯೋಜನೆಗಳು ಜಾರಿಯಾಗುವವರೆಗೆ ಸಾರ್ವಜನಿಕರು ನಿತ್ಯ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಹಾಗೂ ತುರ್ತು ಪರಿಹಾರವೂ ಅಗತ್ಯವಾಗಿದೆ. ರಸ್ತೆ ಬದಿ ಅನಗತ್ಯ ಅತಿಕ್ರಮಣ, ವಾಹನ ನಿಲುಗಡೆ, ಅಂಗಡಿಗಳ ಮುಂಭಾಗದ ಅಸ್ತವ್ಯಸ್ತತೆ ಸೇರಿದಂತೆ ಸಂಚಾರಕ್ಕೆ ಅಡ್ಡಿಯಾಗುವ ಅಂಶಗಳನ್ನು ನಿಯಂತ್ರಿಸುವ ಜೊತೆಗೆ, ಭವಿಷ್ಯದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಮಾಡುವ ಅಗತ್ಯವಿದೆ.
ಜನಸಂಖ್ಯೆ, ವಾಹನಗಳ ಸಂಖ್ಯೆ ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತಿರುವ ಬಿಸಿರೋಡಿಗೆ ಇನ್ನು ವಿಳಂಬವಿಲ್ಲದೆ ಸಮಗ್ರ ಸಂಚಾರ ಯೋಜನೆ ರೂಪಿಸಬೇಕಿದೆ. ಫ್ಲೈಓವರ್, ಆರುಲೇನ್ ರಸ್ತೆ ಅಥವಾ ಸೂಕ್ತ ಪರ್ಯಾಯ ವ್ಯವಸ್ಥೆ—ಯಾವುದೇ ಯೋಜನೆಯಾದರೂ ಶೀಘ್ರ ಅನುಷ್ಠಾನಗೊಂಡು ಬಿಸಿರೋಡಿನ ನಿತ್ಯದ ಟ್ರಾಫಿಕ್ ಜಾಮ್‌ಗೆ ಶಾಶ್ವತ ಮುಕ್ತಿ ದೊರೆಯಬೇಕು ಎಂಬುದು ಸಾರ್ವಜನಿಕರ ಒತ್ತಾಯ.

SHARE
Loading spinner

Leave a Reply

Your email address will not be published. Required fields are marked *

error: Content is protected !!