ಉಡುಪಿ: ಕೃಷ್ಣಾಸುರ ವೇಷದಲ್ಲಿ ತಾಯಿ-ಮಗಳು; ಬಡ ಮಕ್ಕಳ ಶಿಕ್ಷಣಕ್ಕೆ ನೆರವು

ಉಡುಪಿ: ಶ್ರೀಕೃಷ್ಣಾಷ್ಟಮಿ ಅಂಗವಾಗಿ ಮಲ್ಪೆ ಲಕ್ಷ್ಮೀನಗರದ ಶ್ರೀ ಸಿದ್ದಿ ಇವೆಂಟ್ಸ್ ವತಿಯಿಂದ ವಿಶೇಷ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿವ್ಯ ಸತೀಶ್ ಹಾಗೂ ಅವರ ಎಂಟು ವರ್ಷದ ಪುತ್ರಿ ಸಿದ್ದಿ ಎಸ್. ಕಾಮತ್ ಅವರು ಕೃಷ್ಣಾಸುರ ವೇಷ ಧರಿಸಿ ಸಾರ್ವಜನಿಕರಿಂದ ನೆರವು ಸಂಗ್ರಹಿಸಲಿದ್ದು, ಸಂಗ್ರಹವಾಗುವ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ನಿರ್ಧರಿಸಿದ್ದಾರೆ.


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದಿವ್ಯ ಸತೀಶ್ ಅವರು, ತಮ್ಮ ಪುತ್ರಿ ಸಿದ್ದಿ ಎಸ್. ಕಾಮತ್ ಪ್ರತಿವರ್ಷ ಶ್ರೀಕೃಷ್ಣಾಷ್ಟಮಿ ಸಂದರ್ಭದಲ್ಲಿ ಶ್ರೀಕೃಷ್ಣನ ವೇಷ ಧರಿಸುತ್ತಿದ್ದಾಳೆ. ಈ ಬಾರಿ ಮಗಳೊಂದಿಗೆ ತಾವೂ ಕೃಷ್ಣಾಸುರ ವೇಷ ಧರಿಸಿ ಜನರ ಮುಂದೆ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಸಾರ್ವಜನಿಕರಿಂದ ದೊರೆಯುವ ನೆರವನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕಾಗಿ ಬಳಸುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ 4 ಹಾಗೂ 5ರಂದು ಉಡುಪಿ-ಮಲ್ಪೆ ತೊಟ್ಟಂ ಭಾಗದಲ್ಲಿ ತಾಯಿ-ಮಗಳು ಕೃಷ್ಣಾಸುರ ವೇಷದಲ್ಲಿ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ಸಹಾಯಧನವನ್ನು ಅಗತ್ಯವಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ತಮ್ಮಿಂದಾದಷ್ಟು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಸಾಮಾಜಿಕ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ದಿವ್ಯ ಸತೀಶ್ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಮಲ್ಪೆ ಸಿದ್ದಿ ಐ ಕೇರ್ ಮಾಲೀಕ ಸತೀಶ್ ಕಾಮತ್, ಸಿದ್ದಿ ಎಸ್. ಕಾಮತ್, ರಕ್ಷಿತ್, ನಿತೇಶ್ ಹಾಗೂ ಡಾ. ದೀಪ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!