ಮಂಗಳೂರು:* ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಯುವಕರಿಗೆ ಉದ್ಯೋಗ ಹಾಗೂ ಉದ್ಯಮಾವಕಾಶ ಕಲ್ಪಿಸಲು ನೀತಿಗಳಲ್ಲಿ ಅಗತ್ಯ ಬದಲಾವಣೆ ತರಬೇಕು ಎಂದು ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹಿಂದೆ ನೀಡಿದ್ದ ಭರವಸೆಯ ಬಳಿಕ ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಸಭೆ ನಡೆದಿಲ್ಲ ಎಂದು ಅವರು ಟೀಕಿಸಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದು, ಸರ್ಕಾರ ಈ ಕ್ಷೇತ್ರದ ಸಮಸ್ಯೆಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹರಿಸಬೇಕು ಎಂದರು.

ಸಣ್ಣ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಹೋಂಸ್ಟೇ ಉದ್ಯಮಗಳಿಗೆ ಅನುಕೂಲವಾಗುವಂತೆ ಅಬಕಾರಿ ನೀತಿಯನ್ನು ಸರಳಗೊಳಿಸಬೇಕು. ಪ್ರಸ್ತುತ ದುಬಾರಿ ಪರವಾನಗಿ ಶುಲ್ಕ ಹಾಗೂ ವಿವಿಧ ಇಲಾಖೆಗಳ ಅನುಮತಿ ಪ್ರಕ್ರಿಯೆಯಿಂದ ಸಣ್ಣ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾ ಮಾದರಿಯಲ್ಲಿ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುವ ನೀತಿ ರೂಪಿಸಿದರೆ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಹೋಂಸ್ಟೇ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯಲ್ಲಿಯೂ ಹಲವು ಇಲಾಖೆಗಳ ಅನುಮತಿ ಪಡೆಯಬೇಕಾಗಿದ್ದು, ಇದರಿಂದ ಉದ್ಯಮಿಗಳಿಗೆ ವಿಳಂಬ ಹಾಗೂ ತೊಂದರೆ ಎದುರಾಗುತ್ತಿದೆ. ಈ ಪ್ರಕ್ರಿಯೆಯನ್ನು ಸರಳಗೊಳಿಸಿ ಏಕಗವಾಕ್ಷಿ ವ್ಯವಸ್ಥೆ ಅಥವಾ ನಿಗದಿತ ಕಾಲಮಿತಿಯಲ್ಲಿ ಅನುಮತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕು ಎಂದು ಒತ್ತಾಯಿಸಿದರು.

ಮೀನುಗಾರಿಕೆ ಕ್ಷೇತ್ರದತ್ತಲೂ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಕರಾವಳಿಯ ಪ್ರಮುಖ ಉದ್ಯೋಗ ಹಾಗೂ ಆದಾಯದ ಮೂಲವಾಗಿರುವ ಮೀನುಗಾರಿಕೆ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಬಂದರುಗಳಲ್ಲಿ ದೋಣಿ ನಿಲುಗಡೆ, ಮೀನು ಸಂಸ್ಕರಣೆ, ಐಸ್ ಸಂಗ್ರಹಣೆ ಹಾಗೂ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಇದೆ. ಮೀನುಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಅಗತ್ಯವಿದೆ ಎಂದರು.
ಮೀನುಗಾರಿಕೆ ಕ್ಷೇತ್ರದ ಸಮಸ್ಯೆಗಳು ಹಾಗೂ ಕರಾವಳಿಯ ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಅರಿವು ಹೊಂದಿರುವವರನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕರಾವಳಿಯ ಯುವಕರಿಗೆ ಉದ್ಯೋಗ ಮತ್ತು ಉದ್ಯಮಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ದ.ಕ. ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ವಾಸುದೇವ್, ಕಬೀರ್ ಕಾಟಿಪಳ್ಳ ಹಾಗೂ ಫ್ಲೋರಿನ್ ಗೋವಿಯಸ್ ಉಪಸ್ಥಿತರಿದ್ದರು.


Consistency is key and this site provides exactly that. No crashes and very reliable servers. betgame365 is the real deal.