RSS ನೋಂದಣಿ, ಸರ್ಕಾರಿ ನೌಕರರ ಅಮಾನತು ಕುರಿತು ಅನುಪಮಾ ಶೆಣೈ ಪ್ರಶ್ನೆ

ಮಂಗಳೂರು: ಆರ್‌ಎಸ್‌ಎಸ್‌ ನೋಂದಣಿ ವಿಚಾರ ಹಾಗೂ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಸರ್ಕಾರಿ ನೌಕರರನ್ನು ಅಮಾನತುಗೊಳಿಸಿರುವ ಕುರಿತು ಮಾಜಿ ಡಿವೈಎಸ್ಪಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅನುಪಮಾ ಶೆಣೈ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್‌ ಯಾವುದೇ ಕೋಮುಗಲಭೆಯಲ್ಲಿ ಭಾಗಿಯಾಗಿರುವ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ನೀಡಲಾಗಿದೆ. ಆದರೆ ಗಲಭೆ ಪ್ರಕರಣ ಎದುರಿಸುತ್ತಿರುವ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು ಆರ್‌ಎಸ್‌ಎಸ್‌ ಸದಸ್ಯರೇ ಎಂಬುದನ್ನೂ ಪರಿಶೀಲಿಸಬೇಕಿತ್ತು ಎಂದು ಹೇಳಿದರು.

ಆರ್‌ಎಸ್‌ಎಸ್‌ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿಲುವುಗಳಲ್ಲಿನ ವೈರುಧ್ಯವನ್ನು ಅನುಪಮಾ ಶೆಣೈ ಟೀಕಿಸಿದರು. ಯಾದಗಿರಿಯಲ್ಲಿ ಕಳೆದ ವರ್ಷ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಇಬ್ಬರು ಶಾಲಾ ಶಿಕ್ಷಕರನ್ನು ಅಮಾನತುಗೊಳಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸರ್ಕಾರಿ ನೌಕರರ ಅಮಾನತು ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಧ್ವನಿ ಎತ್ತಬೇಕು. ಅನ್ಯಾಯಕ್ಕೊಳಗಾದ ಸರ್ಕಾರಿ ನೌಕರರ ಪರವಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಆರ್‌ಎಸ್‌ಎಸ್‌ ನೋಂದಣಿ ವಿಚಾರವನ್ನು ಮುಂದಿಟ್ಟುಕೊಂಡು, ಸರ್ಕಾರಿ ನೌಕರರು ಹಾಗೂ ಇತರರಿಗೆ ಬೆಂಬಲವಾಗಿ ‘ನಾನೂ ಗಣಪತಿ’ ಎಂಬ ಚಳವಳಿ ಆರಂಭಿಸುವ ಆಲೋಚನೆ ಹೊಂದಿರುವುದಾಗಿ ಅನುಪಮಾ ಶೆಣೈ ತಿಳಿಸಿದರು. ಈ ಕುರಿತು ಜನರು, ನಿವೃತ್ತ ಸರ್ಕಾರಿ ನೌಕರರು, ಪೊಲೀಸರು ಹಾಗೂ ಯೋಧರು ಸಲಹೆ-ಸಹಕಾರ ನೀಡುವಂತೆ ಮನವಿ ಮಾಡಿದರು.

ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸರಸಂಘಚಾಲಕರಾಗಬೇಕು ಎಂಬ ವ್ಯಂಗ್ಯಾತ್ಮಕ ಸಲಹೆಯನ್ನೂ ನೀಡಿದ ಅವರು, ಆರ್‌ಎಸ್‌ಎಸ್‌ ನೋಂದಣಿ ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!