ಉತ್ತರ ಕೇರಳದ ಇತಿಹಾಸ ಅರಿಯುವುದು ಸುಲಭದ ಮಾತಲ್ಲ . ಈ ಭಾಗದ ಇತಿಹಾಸವನ್ನು ತಿಳಿಯುವಲ್ಲಿ ಬರಹಗಳ ಹೊರತಾಗಿ ಇಲ್ಲಿನ ಪುರಾತತ್ವ ವಸ್ತು ಆಧಾರಗಳು ಸಾಕಷ್ಟು ಸಹಕಾರಿಯಾಗಿದೆ. ಅವುಗಳು ಸತ್ಯ ಇತಿಹಾಸಕ್ಕೆ ಕೈ ಕನ್ನಡಿಯಂತಿವೆ. ಅವುಗಳಲ್ಲಿ ಶಾಸನಗಳು , ಕೋಟೆಗಳು , ದೇವಾಲಯಗಳು , ನಾಣ್ಯಗಳು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತವೆ. ಅವು ಇತಿಹಾಸದ ಪುನರ್ ರಚನೆಗೆ ಸಹಕಾರಿಯಾಗುತ್ತವೆ. ಈ ನಾಡಿನ ಸಂಸ್ಕೃತಿಯ ನಾಡಿಮಿಡಿತದಂತಿರುವ ಕೋಟೆ ಕೊತ್ತಲಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲೇಬೇಕು .
ಕಾಸರಗೋಡನ್ನು ಕೋಟೆಗಳ ನಾಡೆಂದು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಪ್ರಸುತ 6 ಕೋಟೆಗಳು ಇವೆ. ಅದರಲ್ಲಿ ಬೇಕಲ್ ಕೋಟೆ , ಪೊವ್ವಲ್ ಕೋಟೆ, ಚಂದ್ರ ಗಿರಿ ಕೋಟೆ , ಕುಂಬಳೆ ಕೋಟೆಗಳನ್ನು ಕೇರಳ ಪುರಾತತ್ವ ಇಲಾಖೆ ರಕ್ಷಣೆ ಮಾಡುತ್ತಿದೆ. ಇತಿಹಾಸದ ದಾಖಲೆಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ ಹೊಸದುರ್ಗ ಕೋಟೆ , ಕಾಸರಗೋಡು ಕೋಟೆಗಳ ಧರೆಗೆ ಉರುಳಿದ ಕಲ್ಲುಗಳು ಇತಿಹಾಸ ಈ ಮಣ್ಣಲ್ಲೂ ಜೀವಂತವಾಗಿದೆ, ಆದರೆ ಸಧ್ಯದಲ್ಲೇ ಅದು ಮಾಯವಾಗುತ್ತದೆ, ಎಂಬ ಸಂದೇಶ ಸಾರುವಂತಿದೆ. ಕೋಟೆಗಳ ವಿಶಿಷ್ಟ ಸಾಲಿನಲ್ಲಿ ಚಂದ್ರಗಿರಿ ಕೋಟೆ ಹೆಗ್ಗುರುತಾಗಿ ನಿಲ್ಲುತ್ತದೆ.
ಈ ಭಾಗದಲ್ಲಿ ಕೆಳದಿ ನಾಯಕರಿಂದ ಕೋಟೆ ಕೊತ್ತಲಗಳು ನಿರ್ಮಾಣವಾದವು. ಅದರಂತೆ ಚಂದ್ರಗಿರಿ ಕೋಟೆಯನ್ನು 17 ನೇ ಶತಮಾನದಲ್ಲಿ ಶಿವಪ್ಪ ನಾಯಕ ನಿರ್ಮಿಸಿದ. ದೊಡ್ಡ ಚೌಕಾಕಾರದ ವಿನ್ಯಾಸ ಹೊಂದಿರುವ ಕೋಟೆ ಸಮುದ್ರ ಮಟ್ಟದಿಂದ 150 ಅಡಿ ಎತ್ತರದಲ್ಲಿದೆ. ಸುಮಾರು ಏಳು ಎಕರೆ ವಿಸ್ತೀರ್ಣದಲ್ಲಿ ಕೋಟೆ ಮತ್ತು ಅದರ ಪರಿಸರ ಹರಡಿಕೊಂಡಿದೆ .
ಚಂದ್ರಗಿರಿ ಕೋಟೆ ಇತಿಹಾಸದ ಪುಟಗಳಲ್ಲಿ ಇತರೆ ಕೋಟೆಗಳಿಗಿಂತ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಚಂದ್ರಗಿರಿ ನದಿ ಅನಾದಿ ಕಾಲದಿಂದಲೂ ತುಳನಾಡು ಮತ್ತು ಕೊಲತ್ತ ನಾಡು ಸಾಮ್ರಾಜ್ಯಗಳ ನಡುವಿನ ಗಡಿಯಾಗಿತ್ತು . ಚಂದ್ರಗಿರಿ ನದಿ ಮತ್ತು ಅರಬ್ಬೀ ಸಮುದ್ರಕ್ಕೆ ಕೋಟೆ ಮುಖಮಾಡಿದೆ. ಕೋಟೆಯ ಬತ್ತೇರಿಯಲ್ಲಿ ನಿಂತು ನೋಡಿದರೆ ಅರಬ್ಬೀ ಸಮುದ್ರ ಮತ್ತು ಪಯಸ್ವಿನಿ ನದಿ ಎಂದು ಕರೆಯುವ ಚಂದ್ರಗಿರಿ ನದಿಯ ಸಂಗಮವನ್ನು ಕಣ್ತುಂಬಿಕೊಳ್ಳಬಹುದು. ಆದ್ರೆ ರಾಜರ ಆಳ್ವಿಕೆ ಕಾಲದಲ್ಲಿ ದೂರದಲ್ಲಿ ಅಸ್ತಿತ್ವದಲ್ಲಿದ್ದ ಬಂದರಿನ ಮೇಲೆ ಕಣ್ಗಾವಲು ಮತ್ತು ಪರಕೀಯರ ಅಕ್ರಮಣವನ್ನು ತಡೆಯಲು, ಅವರ ಮೇಲೆ ಹದ್ದಿನ ಕಣ್ಣಿಡುವುದೇ ಆಗಿತ್ತು .ತುಳುನಾಡ ಅಳುಪರ ಆಳ್ವಿಕೆಯ ನಂತರ ಪ್ರವರ್ಧಮಾನಕ್ಕೆ ಬಂದ ವಿಜಯ ನಗರದ ಅರಸರೂ ತುಳುನಾಡ ಅರಸರಂತೆ ಚಂದ್ರಗಿರಿ ನದಿಯನ್ನು ಗಡಿಯನ್ನಾಗಿ ಮಾಡಿಕೊಂಡಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಈ ಭಾಗದ ಚುಕ್ಕಾಣಿ ಹಿಡಿದದ್ದು ಕೆಳದಿ ನಾಯಕರು. ನಾಯಕರು ಅಧಿಕಾರಕ್ಕೆ ಬಂದ ನಂತರ ಈ ಭಾಗದಲ್ಲಿ ಕೋಟೆಗಳ ನಿರ್ಮಾಣ ಕಾರ್ಯ ಚುರುಕುಕೊಂಡಿತ್ತು . ಅವರಿಂದಲೇ ಕೋಟೆ ಕಟ್ಟುವ ಸಂಸ್ಕೃತಿ ಇಲ್ಲಿ ಆರಂಭವಾಯ್ತು, ಎಂದು ಲಭ್ಯ ಇತಿಹಾಸ ದಾಖಲೆಗಳು ತಿಳಿಸುತ್ತವೆ.
ಲ್ಯಾಟರೈಟ್ ಇಟ್ಟಿಗೆಗಳೆಂದು ಕರೆಯಲ್ಪಡುವ ಕೆಂಪು ಕಲ್ಲುಗಳಿಂದ ಕೋಟೆಯನ್ನು ಕಟ್ಟಲಾಗಿದೆ. ಗೋಡೆಗಳ ಕೆಲವು ಭಾಗಗಳಿಗೆ ಫಿರಂಗಿ ಗುಂಡಿನ ದಾಳಿ ನಡೆದ ಖಚಿತತೆಯ ಗುರುತಿದೆ. ಕೋಟೆಯನ್ನು ಮೂರು ದಿಕ್ಕುಗಳಿಂದ ಒಂದು ಕಂದಕ ಸುತ್ತುವರೆದಿದೆ. ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ, ಎರಡೂ ಕಂದಕಕ್ಕೆ ಹೋಗುವ ಪ್ರವೇಶದ್ವಾರಗಳನ್ನು ಹೊಂದಿವೆ. ಈಶಾನ್ಯ ಮೂಲೆಯಲ್ಲಿ, ಭೂಗತ ಸುರಂಗವೂ ಗೋಚರಿಸುತ್ತದೆ.ಪುರಾತತ್ವ ಇಲಾಖೆ ಕೋಟೆಯಲ್ಲಿ ವೈಜ್ಞಾನಿಕ ಉತ್ಖನನವನ್ನು ನಡೆಸಿತ್ತು. ಇದರಲ್ಲಿ ಕಲ್ಲು ಮತ್ತು ಕಬ್ಬಿಣದ ಫಿರಂಗಿ ಚೆಂಡುಗಳು, ಮಡಿಕೆಗಳು ಮತ್ತು ಕೆಲವು ಕಬ್ಬಿಣದ ಉಪಕರಣಗಳು ಮುಂತಾದ ಅನೇಕ ಪ್ರಾಚೀನ ವಸ್ತುಗಳ ಅವಶೇಷಗಳು ಲಭಿಸಿದೆ. ಕೋಟೆಯು 8 ಕೊತ್ತಲಗಳನ್ನು ಹೊಂದಿದ್ದು, ಪ್ರತಿಯೊಂದೂ ಫಿರಂಗಿ ರಂಧ್ರಗಳನ್ನು ಹೊಂದಿವೆ. ಮುಖ್ಯ ಕೊತ್ತಲ ರಕ್ಷಣಾ ಉದ್ದೇಶದಿಂದ ಉತ್ತರದಲ್ಲಿದೆ. ಸಿಪಾಯಿಗಳ ವಸತಿ ಗೃಹಗಳ ಕುರುಹುಗಳು ಕೂಡ ಈ ಕೋಟೆಯಲ್ಲಿವೆ.
ಕೆಳದಿ ನಾಯಕರಿಗೆ ಸೇರಿದ್ದ ಈ ಕೋಟೆಯನ್ನು, ಮುಂದೆ ನವಾಬ್ ಹೈದರ್ ಅಲಿ ಖಾನ್ ವಶಪಡಿಸಿಕೊಂಡ. ಆನಂತರ ಬ್ರಿಟಿಷರ ವಶವಾಯಿತು. ಕಾಸರಗೋಡಿನಲ್ಲಿರುವ ಹೆಚ್ಚು ಜನಪ್ರಿಯವಾದ ಬೇಕಲ್ ಕೋಟೆಯಷ್ಟು ಈ ಕೋಟೆ ವಿಸ್ತಾರವಾಗಿಲ್ಲದಿದ್ದರೂ, ಚಂದ್ರಗಿರಿ ಕೋಟೆ ಪ್ರವಾಸಿಗರನ್ನು ಒಂದು ಕಾಲದಲ್ಲಿ ಸೆಳೆಯುತ್ತಿತ್ತು. ಆದರೆ, ಇಂದು ಪ್ರವಾಸಿಗರು ಇತ್ತ ಬರದೆ ಕೋಟೆ ಅನಾಥವಾದ ಕಾವಲು ಗೋಪುರದಂತೆ ನಿಂತಿದೆ. ಭವ್ಯ ಇತಿಹಾಸದ ಸ್ಮಾರಕವಾಗಿರುವ ಕೋಟೆ ಇಂದು ಗತವೈಭವವನ್ನು ಕಳೆದುಕೊಳ್ಳುತ್ತಿದೆ. ಕೋಟೆ, ಮಂಗಳೂರಿನ ದಕ್ಷಿಣದಿಂದ ಸುಮಾರು 59 ಕಿಲೋಮೀಟರ್ ಮತ್ತು ಕಣ್ಣೂರಿನಿಂದ 87 ಕಿಲೋಮೀಟರ್ ,ಕಾಸರಗೋಡಿನಿಂದ 5 ಕಿ.ಮೀ ದೂರದಲ್ಲಿದೆ.
ಕೋಟೆಯ ಪ್ರಸ್ತುತ ಸ್ಥಿತಿ
ಸುತ್ತಲೂ ಕಾಡು ಪೊದೆಯಿಂದ ಕೋಟೆಯು ಆವೃತವಾಗಿದೆ. ದೊಡ್ಡ ಬೇರುಗಳು ಕೋಟೆಯ ಕಲ್ಲನ್ನು ಹಾಳು ಮಾಡುತ್ತಿದೆ. ಭವ್ಯವಾದ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟು ಹೊರ ಜಗತ್ತಿಗೆ ತನ್ನ ಗನತೆ ಗಾಂಭೀರ್ಯವನ್ನು ತೋರ್ಪಡಿಸುವ ಕೋಟೆಯ ಇಂದಿನ ಸ್ಥಿತಿ ಚಿಂತಾಜನಕವಾಗಿದೆ. ಈ ರೀತಿಯಾಗಿ ಇತಿಹಾಸದ ಕುರುಹುಗಳು ಅಳಿವಿನ ಅಂಚಿಗೆ ಸಾಗುತ್ತಿದ್ದರೆ ಕೋಟೆಯು ಇತಿಹಾಸದಿಂದ ಮರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ಪೀಳಿಗೆ ಇತಿಹಾಸ ಸ್ಮಾರಕದ ಬಗ್ಗೆ ಅರಿಯಬೇಕಾದರೆ ಇಂದಿನ ಕೋಟೆಯು ಸುಸ್ಥಿತಿಯಲ್ಲಿರಬೇಕು . ಕೋಟೆಯೊಳಗೆ ಕಚೇರಿ ಇದ್ದರೂ ಅದು ಅಧಿಕಾರಿ ಇಲ್ಲದೆ ಅನಾಥವಾಗಿದೆ. ಕೋಟೆ ಕಾಯಲು ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ. ಇದು ಅನೈತಿಕ ಘಟನೆ ನಡೆಯಲು ಸಿದ್ಧ ವೇದಿಕೆಯನ್ನು ಕೂಡ ಇಲ್ಲಿ ಹಾಕಿಕೊಡಲಿದೆ.
ಬೇಕಲಕೋಟೆ ಮಾತ್ರ ಇಲ್ಲಿ ಸುಸ್ಥಿತಿಯಲ್ಲಿದೆ ಮತ್ತೆಲ್ಲಾ ಕೋಟೆಗಳ ವ್ಯಥೆ ಮರಕ ಹುಟ್ಟಿಸುವ ಕಥೆಯೇ ಆಗಿದೆ.
ಗಿರೀಶ್ ಪಿಎಂ
ಕಾಸರಗೋಡು