ಮಂಗಳೂರು ಜೈಲು ಜಾಮರ್ ಸಮಸ್ಯೆ: ವೈಜ್ಞಾನಿಕ ಪರಿಹಾರಕ್ಕೆ ವಕೀಲರ ಒತ್ತಾಯ

ಮಂಗಳೂರು :ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ ವ್ಯವಸ್ಥೆಯಿಂದ ಕಳೆದ ಎರಡು ವರ್ಷಗಳಿಂದ ಮಂಗಳೂರು ನ್ಯಾಯಾಲಯ, ಸುತ್ತಮುತ್ತಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ವಸತಿ ವ್ಯವಸ್ಥೆಗಳು ಹಾಗೂ ವಿವಿಧ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ.ಈ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

ಮೊಬೈಲ್‌ ಜಾಮರ್‌ನ ಪರಿಣಾಮವಾಗಿ ನ್ಯಾಯಾಲಯದ ಆವರಣ ಹಾಗೂ ಸುತ್ತಮುತ್ತ ಮೊಬೈಲ್ ಸಂಪರ್ಕ ಸರಿಯಾಗಿ ಲಭ್ಯವಾಗದ ಕಾರಣ ಕಕ್ಷಿದಾರರು, ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಲವು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದ ತುರ್ತು ಸಂಪರ್ಕ, ಮಾಹಿತಿ ವಿನಿಮಯ ಹಾಗೂ ನ್ಯಾಯಾಲಯದ ದೈನಂದಿನ ಕಾರ್ಯಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀರುತ್ತಿದೆ.

ನ್ಯಾಯಾಲಯದ ಸಮೀಪದಲ್ಲಿರುವ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗೂ ಮೊಬೈಲ್ ಸಂಪರ್ಕದ ಸಮಸ್ಯೆ ಎದುರಾಗುತ್ತಿದೆ. ಇದರ ಜೊತೆಗೆ ಹೋಟೆಲ್‌ಗಳು, ವಸತಿ ಗೃಹಗಳು ಹಾಗೂ ಇತರ ವ್ಯಾಪಾರ ಸಂಸ್ಥೆ ಗಳ ಗ್ರಾಹಕ ಸೇವೆ ಮತ್ತು ದೈನಂದಿನ ವ್ಯವಹಾರಗಳಿಗೂ ಅಡಚಣೆ ಉಂಟಾಗುತ್ತಿದೆ. ಪ್ರಮುಖ ಕರಾವಳಿ ನಗರವಾಗಿರುವ ಮಂಗಳೂರಿನಂತಹ ನಗರದಲ್ಲಿ ಇಂತಹ ನಿರಂತರ ಸಂಪರ್ಕ ಸಮಸ್ಯೆ ಇರುವುದು ಅಭಿವೃದ್ಧಿಯ ದೃಷ್ಟಿಯಿಂದಲೂ ಆತಂಕಕಾರಿ ಸಂಗತಿಯಾಗಿದೆ.

ಜೈಲಿನ ಭದ್ರತೆಯ ದೃಷ್ಟಿಯಿಂದ ಮೊಬೈಲ್ ಜಾಮ‌ರ್ ಅಳವಡಿಸುವುದು ಅಗತ್ಯವಾಗಿದ್ದರೂ, ಜೈಲಿನೊಳಗಿನ ಭದ್ರತಾ ಸಮಸ್ಯೆಯನ್ನು ಪರಿಹರಿಸುವ ಹೆಸರಿನಲ್ಲಿ ಜೈಲಿನ ಹೊರಗಿರುವ ಸಾಮಾನ್ಯ ನಾಗರಿಕರು, ನ್ಯಾಯಾಂಗ ವ್ಯವಸ್ಥೆ ಶಿಕ್ಷಣ ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ತಾಂತ್ರಿಕವಾಗಿ ಸಮರ್ಪಕವಾದ, ಜೈಲಿನ ವ್ಯಾಪ್ತಿಗೆ ಮಾತ್ರ ಸೀಮಿತವಾಗುವ ಹಾಗೂ ಹೊರಗಿನ ಸಾರ್ವಜನಿಕ ಜೀವನಕ್ಕೆ ಅಡ್ಡಿಯಾಗದ ವ್ಯವಸ್ಥೆಯನ್ನು ಅಳವಡಿಸಬೇಕಾಗಿದೆ.

ಇತ್ತೀಚೆಗೆ ಜೈಲಿನಲ್ಲಿ ಪೊಲೀಸರು ನಡೆಸಿದ ತಪಾಸಣೆಯ ಸಂದರ್ಭದಲ್ಲಿ ಸುಮಾರು 10 ಮೊಬೈಲ್‌ ಫೋನ್‌ಗಳು ಪತ್ತೆಯಾಗಿರುವುದು ಕೂಡ ಜೈಲಿನೊಳಗಿನ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಲಪಡಿಸುವ ಅಗತ್ಯವನ್ನು ತೋರಿಸುತ್ತದೆ. ಜೈಲಿನೊಳಗೆ ಮೊಬೈಲ್ ಬಳಕೆಯನ್ನು ತಡೆಯುವಲ್ಲಿ ಭದ್ರತಾ ವ್ಯವಸ್ಥೆ ವಿಫಲವಾಗುತ್ತಿರುವುದಕ್ಕೆ ಪರಿಹಾರವಾಗಿ ನಗರದಾದ್ಯಂತ ಮೊಬೈಲ್ ಸಂಪರ್ಕಕ್ಕೆ ಅಡ್ಡಿಪಡಿಸುವುದು ಸಮಂಜಸವಲ್ಲ.

ಈ ಕುರಿತು ಈಗಾಗಲೇ ಮಂಗಳೂರು ವಕೀಲರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಸಮಸ್ಯೆಯನ್ನು ಗೃಹ ಸಚಿವರ ಗಮನಕ್ಕೆ ತಂದು ಪರಿಹರಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ.

ಕರಾವಳಿ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಒಂದೆಡೆ ಮಂಗಳೂರನ್ನು ಅಭಿವೃದ್ಧಿಯ ಪ್ರಮುಖ ನಗರವನ್ನಾಗಿ ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತೊಂದೆಡೆ ನಗರದ ಪ್ರಮುಖ ಭಾಗದಲ್ಲೇ ಮೊಬೈಲ್ ಸಂಪರ್ಕಕ್ಕೆ ನಿರಂತರ ಅಡ್ಡಿಯಾಗುತ್ತಿರುವುದು ವಿಪರ್ಯಾಸವಾಗಿದೆ.

ಮಂಗಳೂರಿನ ನ್ಯಾಯಾಲಯ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ ಮೊಬೈಲ್ ಜಾಮರ್ ವ್ಯವಸ್ಥೆಯನ್ನು ತಕ್ಷಣ ಮರುಪರಿಶೀಲಿಸಿ, ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ಮಂಗಳೂರು ವಕೀಲರ ಸಂಘ ಆಗ್ರಹಿಸಿದೆ.

ಸೆಪ್ಟೆಂಬರ್ 14ರೊಳಗಾಗಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ, ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು. ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಕೆ. ಶೇನವ ಅವರ ನೇತೃತ್ವದಲ್ಲಿ ಮಂಗಳೂರು ವಕೀಲರ ಸಂಘದ ಎಲ್ಲಾ ವಕೀಲರು ಒಗ್ಗೂಡಿ ಈ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘ ಎಚ್ಚರಿಸಿದೆ.

ಜೈಲಿನ ಭದ್ರತೆ ಅತ್ಯಂತ ಮುಖ್ಯವಾದದ್ದು. ಅದೇ ರೀತಿ ನ್ಯಾಯಾಂಗದ ಸುಗಮ ಕಾರ್ಯನಿರ್ವಹಣೆ, ಸಾರ್ವಜನಿಕರ ಸಂಪರ್ಕ ಹಕ್ಕು ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆ ಹಾಗೂ ನಗರದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಸಮತೋಲನದ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!