ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ ನೀಡಲಾಗಿರುವ ನೋಟೀಸ್‌ಗಳ ವಿಚಾರಣೆಯಲ್ಲಿ ಅನಿವಾಸಿ ಮತದಾರರು, ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು, ಅಂಗವಿಕಲರು ಹಾಗೂ ಇತರ ಕಾರಣಗಳಿಂದ ಖುದ್ದಾಗಿ ಹಾಜರಾಗಲು ಸಾಧ್ಯವಾಗದವರಿಗೆ ವಿನಾಯಿತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆಗ್ರಹಿಸಿದ್ದಾರೆ.

ಈ ಕುರಿತು ಚುನಾವಣಾ ಆಯೋಗವು ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ, ಸಂಬಂಧಪಟ್ಟ ಮತದಾರರ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಮುಂದೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಮಾಹಿತಿಯನ್ನು ಜನರಿಗೆ ವ್ಯಾಪಕವಾಗಿ ತಲುಪಿಸುವ ಅಗತ್ಯವಿದೆ ಎಂದು ಐವನ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅವರು ತಮ್ಮ ಮ.ನ.ಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉದಾಹರಣೆ ನೀಡಿದ ಅವರು, ಸುಮಾರು 2.40 ಲಕ್ಷ ಮತದಾರರ ಪೈಕಿ 35,185 ಮಂದಿಗೆ ನೋಟೀಸ್ ನೀಡಲಾಗಿದೆ. ಈ ಪೈಕಿ 28,613 ಮಂದಿಗೆ ನೋಟೀಸ್ ತಲುಪಿದ್ದು, 6,569 ನೋಟೀಸ್‌ಗಳ ವಿತರಣೆ ಬಾಕಿಯಿದೆ. ಇದುವರೆಗೆ 4,112 ಮಂದಿಯ ವಿಚಾರಣೆ ಪೂರ್ಣಗೊಂಡಿದ್ದು, ಶೇ.20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ವಿಚಾರಣೆ ನಡೆದಿದೆ ಎಂದರು.

ಹೆಸರು, ತಂದೆಯ ಹೆಸರು ಸೇರಿದಂತೆ ಮತದಾರರ ವಿವರಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಸರಿಪಡಿಸುವ ಜವಾಬ್ದಾರಿ ಬಿಎಲ್‌ಒಗಳದ್ದಾಗಿದೆ. ಸಣ್ಣಪುಟ್ಟ ತಪ್ಪುಗಳಿಗಾಗಿ ಮತದಾರರನ್ನು ನಗರಕ್ಕೆ ಕರೆಸಿ ಗಂಟೆಗಟ್ಟಲೆ ಕಾಯಿಸುವ ಬದಲು, ಬಿಎಲ್‌ಒಗಳು ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅಲ್ಲಿಯೇ ತಿದ್ದುಪಡಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಎನ್‌ಎಸ್‌ಯುಐನ ಸುಹನ್ ಆಳ್ವ, ಶೌನ್, ಮಾಜಿ ಕಾರ್ಪೊರೇಟರ್‌ಗಳಾದ ಅಪ್ಪಿ ಎಸ್., ಭಾಸ್ಕರ್ ರಾವ್, ಸತೀಶ್ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಮನುರಾಜ್ ಎಂ.ಪಿ., ಶರತ್ ಕುಮಾರ್ ಹೊಯ್ಗೆ ಬಜಾರ್ ಹಾಗೂ ಇಮ್ರಾನ್ ಎ.ಆರ್. ಉಪಸ್ಥಿತರಿದ್ದರು.

