ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಸೆ.17ರಂದು ಶಿಲಾನ್ಯಾಸ

ಮಂಗಳೂರು, ಸೆ.14: ಕರಾವಳಿ ಭಾಗದ ದೀರ್ಘಕಾಲದ ಬೇಡಿಕೆಯಾಗಿರುವ ಮಂಗಳೂರಿನ ಹಜ್ ಭವನ ನಿರ್ಮಾಣಕ್ಕೆ ಸೆ.17ರಂದು ಸಂಜೆ 4.30ಕ್ಕೆ ಬಜಪೆಯಲ್ಲಿ ಶಿಲಾನ್ಯಾಸ ನೆರವೇರಲಿದೆ ಎಂದು ಕರ್ನಾಟಕ ರಾಜ್ಯ ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಜಿ ಡಾ. ಯೆನೆಪೋಯ ಅಬ್ದುಲ್ಲ ಕುಂಞಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ತಾಲೂಕಿನ ಬಜಪೆಯಲ್ಲಿ ಉದ್ಯಮಿ ಇನಾಯತ್ ಅಲಿ ಅವರು ತಮ್ಮ ತಂದೆ-ತಾಯಿಯ ಸ್ಮರಣಾರ್ಥ ಹಜ್ ಭವನ ನಿರ್ಮಾಣಕ್ಕಾಗಿ ಸುಮಾರು 1.55 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಈ ಜಾಗದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ ಬಹುಉದ್ದೇಶಿತ ಹಜ್ ಭವನ ನಿರ್ಮಾಣಗೊಳ್ಳಲಿದೆ. ಹಜ್ ಯಾತ್ರಿಕರಿಗೆ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಒಂದೇ ಸ್ಥಳದಲ್ಲಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಭವನವನ್ನು ನಿರ್ಮಿಸಲಾಗುತ್ತಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವುದರಿಂದ ಯಾತ್ರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಹಜ್ ಭವನದಲ್ಲಿ ಮಲ್ಟಿ ಪರ್ಪಸ್ ಸಭಾಂಗಣ, 500ಕ್ಕೂ ಅಧಿಕ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶಾಲ ಆವರಣ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಮಂಗಳೂರಿನಿಂದಲೇ ಜಿದ್ದಾ ಮೂಲಕ ಹಜ್ ಯಾತ್ರೆಗೆ ನೇರ ವಿಮಾನ ಸೇವೆ ಆರಂಭಿಸಲು ಹಜ್ ಭವನ ನಿರ್ಮಾಣವು ಪೂರಕವಾಗಲಿದೆ. ಈ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಕ್ಕಾಗೆ ನೇರ ವಿಮಾನ ಸೇವೆ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿತ್ತು. ಆದರೆ ಕೊರೊನಾ ಬಳಿಕ ಕರ್ನಾಟಕದಲ್ಲಿ ಬೆಂಗಳೂರಿನಿಂದ ಮಾತ್ರ ಹಜ್ ಯಾತ್ರೆ ಕೈಗೊಳ್ಳುವ ವ್ಯವಸ್ಥೆ ಸೀಮಿತಗೊಂಡಿದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಹಜ್ ಯಾತ್ರಿಕರಿಗೆ ತೊಂದರೆಯಾಗಿದ್ದು, ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಕರ್ನಾಟಕದಿಂದ ಹಜ್ ಯಾತ್ರೆ ಕೈಗೊಳ್ಳುವವರ ಪೈಕಿ ಸುಮಾರು ಶೇ.35ರಷ್ಟು ಮಂದಿ ಕರಾವಳಿ ಮತ್ತು ಮಲೆನಾಡು ಭಾಗದವರಾಗಿದ್ದಾರೆ. ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಗೊಂಡ ಬಳಿಕ ಈ ಭಾಗದ ಯಾತ್ರಿಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಸೆ.17ರಂದು ಸಂಜೆ 4.30ಕ್ಕೆ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಜಿಫ್ರಿ ಮುತ್ತು ಕೋಯ ತಂಙಳ್, ಪಾಣಕ್ಕಾಡ್ ಅಬ್ದುಲ್ ನಾಸಿರ್ ತಂಙಳ್, ಕೆ.ಎಸ್. ಆಟಕೋಯ ತಂಙಳ್, ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಕರ್ನಾಟಕ ಸರ್ಕಾರದ ಆರೋಗ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಸಿಇಒ ಜೀಲಾನಿ ಮೊಕಾಶಿ, ಸದಸ್ಯ ಸೈಯದ್ ಅಶ್ರಫ್ ತಂಙಳ್ ಆದೂರು, ಪ್ರಮುಖರಾದ ಹಾಜಿ ಎಸ್.ಎಂ. ರಶೀದ್, ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಹಾಜಿ ಸಿ. ಮಹಮೂದ್ ಹಾಗೂ ಮುಹಮ್ಮದ್ ಹನೀಫ್ ಹಾಜಿ ಉಪಸ್ಥಿತರಿದ್ದರು.

SHARE
Loading spinner

One thought on “ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಸೆ.17ರಂದು ಶಿಲಾನ್ಯಾಸ

Leave a Reply

Your email address will not be published. Required fields are marked *

error: Content is protected !!