ಕಾಸರಗೋಡು: ಹೈಕೋರ್ಟ್ ಮೂಲಕ ವಿಚ್ಛೇದನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿಕೊಡುವುದಾಗಿ ಹಾಗೂ ಜೀವನದಲ್ಲಿನ ಸಮಸ್ಯೆಗಳನ್ನು ಪೂಜೆ-ಪುನಸ್ಕಾರಗಳ ಮೂಲಕ ಪರಿಹರಿಸಿಕೊಡುವುದಾಗಿ ನಂಬಿಸಿ ಗೃಹಿಣಿಯೊಬ್ಬರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕೋಟಯಂ ಆನಿಕ್ಕಾಡ್ ನಿವಾಸಿ ಆ್ಯಂಟನಿ ವಿನ್ಸೆಂಟ್ ಬಂಧಿತ ಆರೋಪಿ. ಉದುಮ ನಿವಾಸಿ ಮಹಿಳೆಯೊಬ್ಬರಿಂದ ಆರೋಪಿ ಹಣ ವಂಚಿಸಿದ್ದಾನೆ.
2025ರ ಸೆಪ್ಟೆಂಬರ್ 17ರಿಂದ 2026ರ ಜನವರಿ 2ರವರೆಗೆ ಈ ವಂಚನೆ ನಡೆದಿದೆ. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳೆಗೆ ಫೇಸ್‌ಬುಕ್ ಮೂಲಕ ಪರಿಚಯವಾದ ಆರೋಪಿ, ಬಳಿಕ ಫೋನ್ ಹಾಗೂ ವಾಟ್ಸಾಪ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದು, ಆಕೆಯ ವಿಶ್ವಾಸ ಗಳಿಸಿದ್ದಾನೆ.

ನಂತರ ಹೈಕೋರ್ಟ್ ಮೂಲಕ ವಿಚ್ಛೇದನ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಿಕೊಡುವುದಾಗಿ ಹಾಗೂ ಆಕೆಯ ಜೀವನದಲ್ಲಿರುವ ಸಮಸ್ಯೆಗಳಿಗೆ ವಿಶೇಷ ಪೂಜೆಗಳನ್ನು ನಡೆಸಿದರೆ ಪರಿಹಾರ ದೊರೆಯಲಿದೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಮಹಿಳೆಯಿಂದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಲವು ಬಾರಿ ಒಟ್ಟು ₹13,16,731 ಹಣವನ್ನು ಆರೋಪಿ ಪಡೆದು ವಂಚಿಸಿದ್ದಾನೆ.
ದೂರು ದಾಖಲಾದ ಬಳಿಕ ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ನಡೆಸಿದ ವೈಜ್ಞಾನಿಕ ತನಿಖೆಯಲ್ಲಿ ಆರೋಪಿ ಕೊಲ್ಲಂ ತೆನ್ಮಲದಲ್ಲಿ ಸಿಕ್ಕಿಬಿದ್ದಿದ್ದಾನೆ.

ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ (ಇನ್‌ಚಾರ್ಜ್) ನಳಿನಾಕ್ಷನ್ ಪಿ. ಅವರ ನೇತೃತ್ವದಲ್ಲಿ ಎಸ್‌ಐ ಸವ್ಯಸಾಚಿ, ಎಎಸ್‌ಐಗಳಾದ ರಂಜಿತ್ ಕುಮಾರ್ ಪಿ.ಕೆ., ದಿಲೀಶ್ ಎಂ., ಪ್ರಶಾಂತ್ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಸವಾದ್ ಅಶ್ರಫ್, ವಿಪಿನ್ ಒಳಗೊಂಡ ತನಿಖಾ ತಂಡ ಸೈಬರ್ ಸೆಲ್‌ನ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದೆ.

