ಮೀನುಗಾರಿಕೆ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಸಿಎಂ

ಮಂಗಳೂರು: ಮೀನುಗಾರಿಕೆ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮೀನುಗಾರರು, ಮೀನು ಮಾರಾಟಗಾರರು, ವರ್ತಕರು ಹಾಗೂ ಜೆಟ್ಟಿ ಪ್ರದೇಶಗಳ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಹಲವು ಬೇಡಿಕೆಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಮೀನುಗಾರಿಕಾ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವ್ಯವಹಾರ ಚಟುವಟಿಕೆಗಳನ್ನು ಅಕ್ರಮವಾಗಿ ಸ್ಥಗಿತಗೊಳಿಸಿರುವುದು ಕಂಡುಬಂದರೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜೆಟ್ಟಿ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆ ಬಂದ್ ಮಾಡಿರುವುದು ಹಾಗೂ ಅನುಮತಿ ಇಲ್ಲದೆ ಕಾಂಪೌಂಡ್ ನಿರ್ಮಿಸಿರುವುದು ಗಮನಕ್ಕೆ ಬಂದಿದೆ. ಅಗತ್ಯವಿದ್ದಲ್ಲಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಖಾಸಗಿ ಜಾಗದ ಸಮಸ್ಯೆ ಇದ್ದಲ್ಲಿ ದಾಖಲೆ ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಳಿವೆ ಬಾಗಿಲಿನಲ್ಲಿ ದೀರ್ಘಕಾಲದಿಂದ ಡ್ರೆಡ್ಜಿಂಗ್ ನಡೆಯದಿರುವುದನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ. ಡ್ರೆಡ್ಜಿಂಗ್‌ನಿಂದ ದೊರೆಯುವ ಮಣ್ಣನ್ನು ಸಮುದ್ರಕ್ಕೆ ಬಿಡಬೇಕೇ ಅಥವಾ ಭೂಭಾಗ ವಿಸ್ತರಣೆಗೆ ಬಳಸಬೇಕೇ ಎಂಬ ಬಗ್ಗೆ ತಾಂತ್ರಿಕ ಸಮಿತಿಯ ಸಲಹೆ ಪಡೆಯಲಾಗುವುದು. ಸಾಗರಮಾಲಾ ಯೋಜನೆಯಡಿ ಡ್ರೆಡ್ಜಿಂಗ್‌ಗೆ ಮೀಸಲಾದ ಅನುದಾನ ಬಳಕೆಯಾಗದಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.

ಮೀನುಗಾರ ಮಹಿಳೆಯರಿಗೆ ಜೆಟ್ಟಿಯಲ್ಲಿ ಶೌಚಾಲಯ, ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ತುರ್ತು ಸಂದರ್ಭಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಕರಾವಳಿಯ ಮೀನುಗಾರಿಕೆ ಕ್ಷೇತ್ರವನ್ನು ಆಧುನಿಕಗೊಳಿಸಿ ‘ಬ್ಲೂ ಎಕಾನಮಿ’ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಮೀನುಗಾರಿಕೆ, ತಾಂತ್ರಿಕ ಶಿಕ್ಷಣ, ಉದ್ಯೋಗ ಹಾಗೂ ಸಮುದ್ರಾಧಾರಿತ ಚಟುವಟಿಕೆಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಕಸ್ತೂರಿರಂಗನ್ ವರದಿ ವಿಚಾರವಾಗಿ ಸೋಮವಾರ ವಿಶೇಷ ಅಧಿವೇಶನ ಕರೆಯಲಾಗಿದ್ದು, ಕ್ಷೇತ್ರ ಮಟ್ಟದಲ್ಲಿ ಜನರ ಅಭಿಪ್ರಾಯ ಹಾಗೂ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್, ಇನಾಯತ್ ಅಲಿ, ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

SHARE
Loading spinner

One thought on “ಮೀನುಗಾರಿಕೆ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಸಿಎಂ

Leave a Reply

Your email address will not be published. Required fields are marked *

error: Content is protected !!