ಮಂಗಳೂರು: ಸಹಕಾರಿ ರಂಗದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ಕೃಷ್ಟ ಬ್ಯಾಂಕಿಂಗ್ ಸೇವೆ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ‘ಅತ್ಯುತ್ತಮ ಸಾಧನ ಪ್ರಶಸ್ತಿ’ ಲಭಿಸಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್. ರವಿ ಅವರಿಂದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಹಾಗೂ ಎಂ. ಮಹೇಶ್ ಹೆಗ್ಡೆ ಅವರು ಪ್ರಶಸ್ತಿ ಸ್ವೀಕರಿಸಿದರು.
2024-25ನೇ ಸಾಲಿನಲ್ಲಿ ಬ್ಯಾಂಕ್ ಉತ್ತಮ ಕಾರ್ಯನಿರ್ವಹಿಸಿ ವ್ಯವಹಾರದ ಗುರಿಯನ್ನು ಉತ್ತಮ ಶ್ರೇಣಿಯಲ್ಲಿ ತಲುಪಿದ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್‌ನ ಬಹುಮಾನ ಯೋಜನೆಯಡಿ ವರ್ಗೀಕರಣ ‘11’ರಲ್ಲಿ ಪ್ರಥಮ ಸ್ಥಾನ ಪಡೆದು ಈ ಪ್ರಶಸ್ತಿಗೆ ಭಾಜನವಾಗಿದೆ.

24ನೇ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 113 ಶಾಖೆಗಳ ಮೂಲಕ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿರಂತರವಾಗಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗೆ ಪಾತ್ರವಾಗುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಇದು 24ನೇ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯಾಗಿದೆ.
ಗ್ರಾಹಕರ ಸೇವೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿಕೊಂಡಿರುವ ಬ್ಯಾಂಕ್‌ಗೆ ವರದಿ ವರ್ಷದಲ್ಲಿ ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಐದು ಬಾರಿ ಎಪಿವೈ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಲ್ಲದೆ, ವರದಿ ವರ್ಷದಲ್ಲಿ ಬ್ಯಾಂಕ್ ನೀಡಿದ ಕೃಷಿ ಸಾಲಗಳು ಶೇ.100ರಷ್ಟು ಮರುಪಾವತಿಯಾಗಿದ್ದು, ಕಳೆದ 31 ವರ್ಷಗಳಿಂದ ಈ ಸಾಧನೆಯನ್ನು ನಿರಂತರವಾಗಿ ದಾಖಲಿಸಿಕೊಂಡು ಬಂದಿರುವುದಾಗಿ ಬ್ಯಾಂಕ್ ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಶರಣೇಗೌಡ ಪಾಟೀಲ ಬಯ್ಯಾಪುರ, ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್, ನಿರ್ದೇಶಕರಾದ ಕೊಡಂದೇರ ಪಿ. ಗಣಪತಿ, ಶಿವಕುಮಾರ್ ಗೌಡ ಪಾಟೀಲ್, ರಾಹುಲ್ ಸತೀಶ್ ಜಾರಕಿಹೊಳಿ, ಸೂರಜ್ ಆರ್. ಆರ್. ನರೇಂದ್ರ, ಪಿ. ಮೂಕಯ್ಯ ಸ್ವಾಮಿ, ಹೆಚ್.ಬಿ. ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.

